ಕಾಲನ ಕಲ್ಲಿನ ಚಕ್ರಗಳು!
ತೊಡೆಗಳ ಎಲುವಿನ ಅಚ್ಚುಗಳು!
ಪೊಳ್ಳಿನ ಹೃದಯದ ಹಂದರವು!
ಗಂಡಿನ ಹೆಣ್ಣಿನ ಹುಡುಗರ ಕಳಸ!


ಕಟ್ಟೋ ಮಂಗಲ ಸೂತ್ರಗಳ!
ರುಂಡ ದಿಂಡಗಳ ಮಾಲೆಗಳ!
ಬೆಳಗೋ ಕಂಗಳ ಕತ್ತಲೆದೀಪ!
ಹಾಕೋ ನಿಡಿದುಸಿರಿನಧೂಪ!


ಬಿಗಿಯೋ ಕೂದಲ ಹಗ್ಗವನು!
ಹೊಡೆಯೊ ಹುರುಪಿಲಿ ಕೇಕಿಯನು!
ಊದೋ ಕಹಳೆ ತುತ್ತೂರಿಯನು!
ದೂಡೋ ಹಿಂದಕೆ ವಿಧವೆಯನು!


ಉರುಳಿತು ಅದದೋ, ಅಪ್ಪನ ತೇರು!
ಕಾಣುವವಯ್ಯೋ, ಕಣ್ಣಲಿ ನೀರು!
ಸಾಗಿತು, ಸಾಗಿತು ಸಿದಿಗೆಯ ತೇರು!
ಕಾಲನ ಕಣ್ಣಲಿ ಮಣ್ಣನು ತೂರು!
*****