ಮನಸೇ ಮನಸಿನ ಮನಸ ನಿಲ್ಲಿಸುವುದು
ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ ||ಪ||

ತನುತ್ರಯದೊಳು ಸುಳಿದಾಡುವ ಜೀವನ
ಗುಣವರಿತರೆ ನಿಜಬಾರಲೋ ಮನಸೇ ||೧||

ದಶದಿಕ್ಕಿಗೆ ಹಾರಾಡುವ ಹಕ್ಕಿಯು
ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ ||೨||

ಗುರುಗೋವಿಂದನ ಚರಣಕಮಲದೊಳು
ಸ್ವರಗೊಂಬುವ ಭ್ರಮರಾಳಿಯ ಮನಸೇ ||೩||

ವಿಷಯಗಳಲ್ಲಿ ಸುಖ ಬಯಕೆ ಬಯಸಿ ಭವ
ನಿಶೆಜೋತಿ ಪ್ರಕಾಶವು ಮನಸೇ ||೪||

ಇಳೆಯೊಳು ಶಿಶುನಾಳಧೀಶ ನಿರ್ಮಲನು
ತಿಳಿದರೆ ಒಳಹೊರಗೊಂದು ಮನಸೇ ||೫||

****