ಹೋಳಿ ಹುಣ್ಣಿವೆ ದಿನದಂದು
ಸೋಮ್ ವ್ಯೋಮಾದಿ ಸೇರಿ
ಅಗೆದರು ಮನೆಯ ಮುಂದೊಂದು
ಕಾಮ ದಹನದ ಗುಂಡಿಯೊಂದು

ನೆಟ್ಟರು ನಾಲ್ಕು ಕೋಲು-ಗಳ
ಹಚ್ಚಲು ಬಣ್ಣದ ಹಾಳೆಗಳ
ಜಗಮಗ ಲೈಟನು ಹಾಕಿದರು
ಸೌದೆ ಹೊರೆಗಳ ಒಟ್ಟಿದರು

ಚಂದ್ರ ಜಗವನು ಬೆಳಗಿದನು
ಸೌದೆಗೆ ಘಾಸಲೇಟ್ ಚೆಲ್ಲಿದರು
ಬೆಂಕಿ ಕಡ್ಡಿಯನು ಗೀರಿದರು
ಧಗ ಧಗಿಸುತ್ತ ಉರಿಸಿದರು

ಕಾಮಣ್ಣ ಸತ್ತ ಎಂದೆನ್ನುತ್ತ
ಲಬೋ ಲಬೋ ಬಾಯಿ ಬಡಿಯುತ್ತ
ಕಾಮನ ಬೆಂಕಿಯ ಕೆಂಡಗಳಲ್ಲಿ
ಸುಟ್ಟು ತಿಂದರು ಕಡಲೆ ಗಿಡಗಳ

ಮರುದಿನ ಹೋಕುಳಿ ಆಡಿದರು
ಕೆಂಪು ಹಳದಿ ನೀಲಿ ಹಸಿರು
ಬಣ್ಣದ ಎರಕವ ಹೊಯ್ದರು
ಗುರುತು ಸಿಗದಂತೆ ಮಾಡಿದರು

ಹೆದರಿದವರ ಅಟ್ಟಿಸಿಕೊಂಡು
ಅರಚಿದವರ ಎತ್ತಿಕೊಂಡು
ಬಣ್ಣದ ಬೇಟೆಯ ಆಡಿದರು
ನಕ್ಕು ನಲಿದು ಕುಣಿದಾಡಿದರು

ಹೊಟ್ಟೆಯು ಚುರು ಚುರುಗುಟ್ಟಲು
ಮನೆಯ ಕಡೆಗೆ ಮುಖ ಮಾಡಿದರು
ಕನ್ನಡಿಯಲಿ ಮುಖ ನೋಡಿಕೊಂಡರು
ವಿಕೃತಿ ನೋಡಿ ಸುಸ್ತಾದರು

ಬಣ್ಣದ ಉಡುಪು ಕಳಚಿದರು
ಬಚ್ಚಲು ಮನೆಗೆ ಓಡಿದರು
ಸೋಪನು ಹಾಕಿ ಉಜ್ಜಿಕೊಳ್ಳುತ
ಸ್ನಾನವ ಮಾಡಿ ಮುಗಿಸಿದರು

ಕಾಮನ ದಹಿಸಿದ ಆ ಸಂಭ್ರಮದಲ್ಲಿ
ತಾಯಿ ಬಿಸಿ ಬಿಸಿ ಹೋಳಿಗೆ ಬಡಿಸಿದಳು
ಹೊಟ್ಟೆ ತುಂಬ ಉಂಡ ಸೋಮನು
ಗೊರ ಗೊರ ನಿದ್ದೆಯ ಮಾಡಿದನು
*****