‘ಸಾಹಿತಿಗಳ ಜಗಳ ಗಂಧ ತೀಡಿದ್ದಾಂಗ’ ಅಂತ ಆವರ ಜಗಳವನ್ನೆಲ್ಲ ಎಂಟರ್ಟೈನ್ಮೆಂಟ್ ಆಗಿ ತಗೊಳ್ಳೋ ರೀಡರ್ಸ್ ಅಭಿಪ್ರಾಯ. ಅಡಿಗರು, ಕೆ. ಎಸ್. ನರಸಿಂಹಸ್ವಾಮಿ ಅವರನ್ನ ಪುಪ್ಪಕವಿ ಅಂತ ಚೇಡಿಸಿದರೆ, ಇದೇ ಅಡಿಗರು ಬಿಜೆಪಿ ಕನೆಕ್ಷನ್ ತಗಂಡು ಯಲಕ್ಷನ್ನಿಗೆ ನಿಂತಾಗ ಹರಕು ಬಾಯಿ ಚಂಪಾ, ಅನಂತಮೂತ್ರಿ ಅನಂತಾನಂತವಾಗಿ ಖಂಡಿಸಿ ವಿರೋಧಿ ಹೇಳಿಕೆಗಳನ್ನು ಮಂಡಿಸಿದ್ದುಂಟು. ಚಂಪಾ ಲಂಕೇಶರನ್ನು ತನ್ನ ಸಂಕ್ರಮಣದಲ್ಲಿ ಗೇಲಿ ಮಾಡಿದ್ದು, ‘ಚಂಪಾ ಎಂಥ ಗಾಂಪ’ ಅಂಬೋದ್ನ ಲಂಕೇಶ್ ಕರುನಾಡಿಗೇ ಜಾಹೀರು ಮಾಡಿದ್ದು ಮೆಮೋರಬಲ್ ಕಣ್ರಿ. ಇತ್ತೀಚಿಗೆ ರವಿಬೆಳ್ಗೆರೆ ಇವರ ಮೇಲೆಲ್ಲಾ ಮುಕ್ಕಂಡು ಬಿದ್ದಾಗ ಸೈರಣೆಗೆಟ್ಟ ಇವರು; ಆತನ ಕೌಟುಂಬಿಕ ವಿಷಯಗಳನ್ನೆಲಾ, ಲೇವಡಿ ಮಾಡಿದ್ದು ಮಜಾಕ್ಕಿಂತ ಮುಜುಗರವನ್ನುಂಟುಮಾಡಿತ್ತು. ನಮ್ಮ ಹಳೆ ಸಾಹಿತಿಗಳೇನು ಕಡಿಮೆಯಿಲ್ಲ ಬಿಡ್ರಿ. ಶಂ.ಭಾ. ಜೋಷಿ, ದ.ರ. ಬೇಂದ್ರಯನ್ನು ಧಾರಾಕಾರವಾಗಿ ಕೀಟಲೆ ಮಾಡಿದರೆ, ಬೇಂದ್ರೆ ಜೋಷಿಯ ಸಾಹಿತ್ಯದ ಜಾತಕ ಜಾಲಾಡಿದ್ದು ಓದುಗರಲ್ಲಿ ಕಚಗುಳಿಯನ್ನುಂಟು ಮಾಡಿದ್ದೇ ಹೆಚ್ಚು. ಮಸಾಲದೋಸೆ ಪ್ರಸ್ತಾಪ ಮಾಡಿದ ಮೊದಲ ಸಾಹಿತಿ ಶಿವರಾಮಕಾರಂತರೇ ನೆಪ್ಪಿಲ್ರಿ. ಇಲ್ಲೂ ಚಂಪಾನ ಗೇಲಿ ರಿಮೇಕೆ. ಲಕ್ಷೀನಾರಾಯಣಭಟ್ಟ ರಾಮಚಂದ್ರ ಶರ್ಮರ ಕಾವ್ಯದ ಮೇಲಿನ ಒಣ ಚರ್ಮ ಸುಲಿದರೆ, ಶರ್ಮ ತಮ್ಮ ಕವಿತೆಗಳಲ್ಲಿ ಭಟ್ಟರಿಗೆ ಚಟ್ಟ ಕಟ್ಟದೆ ಬಿಡ್ಲಿಲ್ಲ ನೋಡ್ರಿ. ಶಿವರಾಮಕಾರಂತರೇ ಮೂಡ್ ಕೆಟ್ಟಾಗ ಮಲ್ಲಾಡಿಹಳ್ಳಿ ತಿರುಕ, ರಾಘವೇಂದ್ರ ಸ್ವಾಮಿಗಳ ಹುಚ್ಚು ಮನಸ್ಸಿನ ಹತ್ತು ಮುಖಗಳನ್ನು ತೆರೆದಿಟ್ಟಿದ್ದಂತೂ ಸೋಜಿಗವೆನಿಸಿತ್ತು. ದೇಜ‘ಗೌ’ ಅನಂತು ಬಗ್ಗೆ ‘ಬೌ’ ಅಂದಿದ್ದು ಅವರ ಮನೋಸ್ಥಿತಿಯನ್ನು ಮೂತ್ರಿ ಚೇಡಿಸಿದ್ದು ಅವರವರ ‘ಇಗೋ’ ಪ್ರದರ್ಶನ ಮಾಡಿಸಿತಷ್ಟೆ. ಜಗಳವಾಡೋ ವಿಷಯದಾಗೆ ಲಂಕೇಶರಿಗೆ ಯಾರೂ ಸರಿ ಸಾಟಿಯಾಗಲಾರ್ರು ಬಿಡ್ರಿ! ಸುಮತೀಂದ್ರ ನಾಡಿಗರಲ್ಲಿ ಇಲ್ಲದ ಸುಮತಿ, ಮತಿ ಎರಡನ್ನೂ ಬಯಲಿಗಿಟ್ಟಿದ್ದು, ಚಂಪಾನ್ನ ಚಂಪಾವತಿಯಾಗಿ ಲಿಂಗಪರಿವರ್ತನೆಯ ಮಾಡಿದ್ದು, ಪೂರ್ಣಚಂದ್ರ ತೇಜಸ್ವಿ ಕಾಸಿನಾಸೆಗೆ ತಂದೆ ಪುಸ್ತಕ ಬಿಕರಿ ಮಾಡಿದ್ದನ್ನ ಕನ್ನಡಿಗರ ಎದುರು ಕೊಡವಿದ್ದುಂಟು. ಅನಂತಮೂತ್ರಿಗೆ ಡಾಲರ್ಸ್ ಕಾಲೋನಿ ಲಿಟ್ಲ್ ಬಾಯ್ ಪಟ್ಟ ಕಟ್ಟಿದ್ದು, ರಾಮಚಂದ್ರಶರ್ಮರ ಕವಿತೆಗಳ ಯಶಸ್ಸಿನ ಮರ್ಮನಾ ಜಾಲಾಡಿದ್ದು, ಕುಕ್ಕಿಲ ಕೃಷ್ಣಭಟ್ಟರ ಚುಂಗು ಹಿಡಿದು ಗುಂಜಾಡಿದ್ದು, ದೇಜಗೌ ಅನುವಾದಕನಲ್ಲ, ಕನ್ನಡದ ಮರ್ಡರ್ ಅಂತ ಡೆತ್ ಸೆಂಟೆನ್ಸ್ ಬರೆದೇ ಲೇಖಣಿಗೆ ರೆಸ್ಟ್ ಕೊಟ್ಟಿದ್ದು ಇತ್ಯಾದಿ. ಹೇಳ್ತಾ ಹೋದ್ರೆ ಈ ಲಂಕೇಶರ ಸಾಹಿತ್ಯ ವಲಯದಲ್ಲಿ ನಂಬಿಕೆಯೊಂದು ಒಡಮೂಡಿತ್ತು.

ಹರಕು ಬಾಯಿ ಚಂಪಾ ಕ.ಸಾ.ಪ. ವನ್ನು ಕಸದ ಬುಟ್ಟಿ ಮಾಡುತ್ತಾ ಇಲ್ಲದ ಗೊಡವೆಗಳ ಮಧ್ಯೆ ಬೀದರ್ನಾಗೆ ಯರ್ರಾಬಿರ್ರಿ ಸಾಹಿತ್ಯ ಸಮ್ಮೇಳನ ಮಾಡಿ ಸಾಹಿತಿಗಳಿಗೆ ಶಿವರಾತ್ರಿ ಜಾಗರಣೆ ಮಾಡಿಸಿ, ಸೀಕರಣೆ ತಿನ್ನಿಸಿದ್ದಕ್ಕೆ ಕೋಟಿಗಟ್ಟಲೆ ಖರ್ಚಾಯಿತೆಂದು ಬೊಂಬ್ಡಿ ಹೊಡಿತಾ ತಿಂದಿದ್ದಕ್ಕೆ ಲೆಕ್ಕ ಕೂಡ್ದೆ ತಂಪಾಗಿ ಕುಂತಿರುವ ಚಂಪಾ, ಅನಂತಮೂತ್ರಿಯಿಂದ ‘ಚೇಳು’ ಟೈಟಲ್ ಪಡೆದದ್ದು ಓಲ್ಡಾತು. ಮೂತ್ರಿಯನ್ನ ಘಟಸರ್ಪ ಅಂತ ರೀಸೆಂಟಾಗಿ ಕುಟುಕಿದ ಈ ಜಂಗಮಯ್ಯ ‘ಮಸಿ ಸಂಸ್ಕೃತಿಯ’ ವಕ್ತಾರನಾದ ಮ್ಯಾಗೆ ಸಿಕ್ಕೋರ ಮೋರೆಗೆಲ್ಲಾ ಮಸಿ ಬಳಲಿಕತ್ತಾನೆ. ನಿಬ್ಬಿಗೆ ಕೆಲಸ ಕೊಡುವುದನ್ನೆಂದೋ ಮರೆತ ಚಂಪಾ ನಾಲಿಗೆ ಮಸೆತವನ್ನು ಮಾತ್ರ ಬಿಟ್ಟಲ್ಲ. ಬಿಡೋದು ಜೀವ ಬಿಟ್ಟಮ್ಯಾಗೇ ಅಂಥಾರೆ ಮೂತ್ರಿ. ಕಸಾಪದ ಪಟ್ಟದಲ್ಲಿ ಸಾಯೋವರ್ಗೂ ತಾನೇ ಗೂಟ ಜಡ್ಕಂಡು ಕುತ್ಕೊಂಬೋ ಇರಾದೆನಾಗೆ ಬೈಲಾಗೇ ತಿದ್ದುಪಡಿ ಮಾಡ್ಲಿಕ್ಕೆ ಹೊಂಟು ಸಾಯ್ತಿಗಳಿಂದ್ಲೆ ತನ್ನ ಮಾರಿಗೆ ಛೀಮಾರಿ ಹಾಕಿಸಿಕೊಂಡ ಈವಯ್ಯನೀಗ ಮಸಾಲೆ ಮೆಲ್ಲುತ್ತಾ ಟೈಮ್ ಸಿಕ್ಕಾಗ ಅವರಿವರನ್ನ ಕುಟುತ್ತಾ ಇರೋ ಸರ್ಕಾರಿ ಸೇವಕ. ಬಂಡಾಯವನ್ನೆಂದೋ ಕೈಬಿಟ್ಟು ‘ಬರಿ ಬಡಾಯ, ಕಸಾಪ ಘರ್ಮೆ ಲಡಾಯ’ ಮಾಡ್ತಾ ಇರೋದು ಸಾಹಿತ್ಯಕ ದುರಂತ. ನಮ್ಮ ಕೆಲವು ಸಾಯ್ತಿಗಳೆಲ್ಲಾ ಒಗ್ಗಟ್ಟನ್ನು ಮರೆತು ಸರ್ಕಾರದ ಒಬ್ಬಟ್ಟು ಸವಿಯುತ್ತಾ ಚಳುವಳಿ ಬಿಟ್ಟು ಕನ್ನಡಮ್ಮನ ಪ್ರಭಾವಳಿಯಲ್ಲಿ ಮಜವಾಗಿ ಬದುಕ್ತಾ ಇರೋದ್ನ ನೋಡೋವಾಗ, ಚೇಳು ಹಾವು ನಾಯಿ ನರಿಗಳಿಗೆ ಸಹ ಹೊಲೀಸಲು ನಾಚಿಕೆ ಆಗ್ತೇತ್ ಬಿಡ್ರಿ. ಯಾಕಂತಿರಾ, ಅವುಗಳ ಅಹಾರ ಅವೇ ಹುಟ್ಟಸ್ಕಂತವೆ. ತಮ್ಮ ತಂಟೆಗೆ ಬಂದ್ರೆ ಮಾತ್ರ ಕುಟುಕ್ತವೆ ಕಚ್ಚುತಾವ್ರಿ.

ಹಿಂದೆ ಪಂಪರನ್ನ ಜನ್ನ ಕುಮಾರವ್ಯಾಸ ಅಂಬೋ ಸಾಹಿತಿಗಳಿದ್ದರೂ ಹಿಂಗೆ ಹಂದಿ ನಾಯಿ ಟೈಪ್ ಕಿತ್ತಾಡಿದ ಎಕ್ಸಾಂಪಲ್ ಇಲ್ ಕಣ್ರಿ. ನಮ್ಮ ಈಗಿನ ಸಾಯ್ತಿಗಳ ಜಗಳ ಗಂಧ ತೀಡಿದಂಗಿಲ್ಲ. ಸೆಗಣಿ ಮಾರಿ ಮ್ಯಾಲೆ ಎರಚ್ಕಂಡಂಗೈತೆ. ಅಕಸ್ಮಾತ್ ನಾನ್ ಎಲ್ಲಾರ್ ಗೆದ್ದು ಬಿಟ್ಟಿದ್ರೆ ಭಾಳ ಜನಕ್ಕೆ ಹಾಲ್ಟ್ ಅಟಾಕ್ ಆಗಿ ಬಿಡೋದು. ಅದಕ್ಕೆ ನಾನ್ ಸೋತಿದ್ದು ಅಂತಾರೆ ಗ್ಯಾನಪೀಠಿ, ಅದೆಂಗಾರ ಆಗಿರ್ಲಿ ಕನ್ನಡ ಶಾಸ್ತ್ರೀಯ ಭಾಷೆ ಆಗಬೇಕೆಂಬ ಕೊಗಿನ ವಾಲ್ಯೂಂ ಡಬ್ಬಲ್ ಆಗೇತ್ರಿ. ಆದ್ರೂ ರಾಜ್ಯಸಭೆಗೆ ಗೆದ್ದು ಬಂದದ್ದು, ತೆಲುಗು ವ್ಯಾಪಾರಿ! ಹಿಂಗಾದಮ್ಯಾಗೆ ಕನ್ನಡ ಶಾಸ್ತ್ರೀಯ ಭಾಷೆ ಆಗ್ಲಿ ಅಂಬೋ ನರಿಗಳ ಕೂಗು ಗಿರಿ ಮುಟ್ಟಾತೆ ಯೇಳ್ರಿ. ಇದರ
ಮಧ್ಯೆ ನಂದೆಲ್ಲಿ ಇಕ್ಲಿ ಅಂತ ಪುಲ್ ಟೈಂ ರಾಜಕಾರಣಿ ಪಾರ್ಟ್ ಟೈಂ ಸನ್ಯಾಸಿ ಆರ್‌ಎಸ್‌ಎಸ್ ಮಠದ ಕುಲಪತಿ ಪೇಜಾವರ ಭೂಪತಿ ‘ಸಂಸ್ಕೃತವೇ ನಿಜವಾದ ಶಾಸ್ತ್ರೀಯ ಭಾಷೆ ಉಳಿದವೆಲಾ ಬರಿ ಶಾಸ್ತ್ರಕ್ಕುಂಟು ಲೆಕ್ಕಕ್ಕಿಲ್ಲ’ ಅಂತ ಗಿಳಿ ಶಾಸ್ತ್ರ ನುಡಿತಾ ಐತೆ ಅಂಬೋ ವಾರ್ತೆ ಘಟ್ಟದ ತಗ್ಗಿನಿಂದ ಹೈ ಜಂಪ್ ಮಾಡೇತ್ರಿ. ಎಚ್ಚರ. ಇಂಥ ಪರಿಸ್ಥಿತಿನಾಗೆ ‘ಪಿರೀತಿ ಇಲ್ದೆ ನಾನೇನು ಮಾಡಾಕಿಲ್ಲ. ಜಗಳಾ ಪಿರೀತಿಯ ಇನ್ನೊಂದು ಪೇಸ್ಕಟ್ಟು’ ಅಂತ ಚಂಪಾ ಚಮಕಾಯಿಸಿದ್ರೆ, ಅನಂತ ಮೂತ್ರಿ ಅನ್ನುತ್ತೆ, ವಿವಾದನಾ ನಾ ಬಿಟ್ಟಾಕಿದ್ರೂ ಅದು ನನ್ನ ಬಿಡವಲ್ಲದಲ್ರಿ! ಬೈರಪ್ಪ ಬರೆದದ್ದೆಲ್ಲಾ ‘ಬರಿ ಬೂಸಾ’ ಅಂತ ಬಂಡಾಯಿಗಳು ಬಾಯಿ ಬಡ್ಕೊಂಡ್ರೆ, ಬಂಡಾಯ ದೋರ್ದೆಲ್ಲಾ ಬಡಿವಾರ ಸರ್ಕಾರಿ ಸೀಟು ಹೊಡೆಯೋ ಚಮತ್ಕಾರ ಅನ್ನುತ್ತೆ ಅಗ್ರಹಾರದ ಬೈರಪ್ಪ. ಇಂಥ ಜಗಳಗಂಟರಿಂದ ಕನ್ನಡದ ಉದ್ಧಾರ ಹೆಂಗಪ್ಪಾ ಯೋಳಿ ಮತ್ತೆ ನೋಡೋವಾ!
*****
೨೯-೦೪-೨೦೦೬