ಹಾರಿಬಂತು ಗುಬ್ಬಿಯೊಂದು
ಕಂಡಿತೊಂದು ಶಾಲೆಮಾಡು
ಕಟ್ಟಿತಲ್ಲೆ ಗೂಡಿನೋಡು

ಹುಲ್ಲು ಕಡ್ಡಿ ನಾರು ಗೀರು
ಸಾಕು ಅದುವೆ ಪರಿಕರ
ಬದುಕಲದುವೆ ಹಂದರ

ಗೂಡು ಕಟ್ಟಿ ಕೈಯ ತಟ್ಟಿ
ಕರೆದು ಅದರ ಗೆಳತಿಯ
ಮೊಟ್ಟೆ ಇಟ್ಟು ಕಾವು ಕೊಟ್ಟು

ಮರಿಯ ಕಂಡು ಹರ್ಷ ಪಟ್ಟು
ಕಾಳು ತರಲು ಗುಬ್ಬಿಹೊರಟು
ಕಣ್ಮಣಿಗೆ ಗುಟುಕು ಕೊಟ್ಟು

ಪುಟ್ಟ ಮರಿಯ ದೊಡ್ಡ ಮಾಡಿ
ರೆಕ್ಕೆಯೊಳಗೆ ಮರೆಯ ಮಾಡಿ
ಹಾರ ಬಯಸೆ ಪ್ರೀತಿ ತೋರಿ

ಬದುಕ ಕಲಿಸಿ ಬಿಡುವುದು
ಗುಬ್ಬಿಗಿಲ್ಲಿ ಯಾರು ಗುರುವು
ಯಾವ ಶಾಲೆ ಯಾರ ಪಾಠ

ಪ್ರಕೃತಿ ಜೊತೆಗೆ ಕಲಿತ ಪಾಠ
ತಾನು ಕಲಿತು ಮರಿಗೂ ಕಲಿಸಿ
ಚಂದದಿಂದ ಬದುಕಿತು

ಕಲಿತು ಕಲಿಸಿ ಬದುಕೊ ರೀತಿ
ಮನುಜಗಿದುವೆ ಒಳ್ಳೆ ನೀತಿ
ಬಾಳಬೆಳಗೊ ಸಹಜ ಪ್ರೀತಿ.
*****