ಅಂದು ಇಡೀ ರಾತ್ರಿ
ಬಿಳಿಯ ಹಾಳೆಗಳಲಿ
ಕಪ್ಪು ಅಕ್ಷರಗಳನ್ನು
ಮೂಡಿಸುತ್ತಲೇ ಇದ್ದೇ
ಕವಿತೆ ನನ್ನೊಳಗೋ
ನಾನು ಕವಿತೆಯೊಳಗೋ
ಇಬ್ಬರೂ ಒಂದಾದ
ಅದ್ಭುತ ರಾತ್ರಿಯದು.
ಅರಿವಿಲ್ಲ ನನಗೆ ಲೋಕದ್ದು
ವಶೀಕರಣಗೊಂಡಿದ್ದೆ
ಕಾವ್ಯ ಪುಂಗಿಯ ನಾದಕೆ
ಹೆಡೆಯಾಡಿಸುತ್ತಿದ್ದ ಹಾವಿನಂತೆ.
ಬಿಳಿಯ ಹಾಳೆಗಳಲ್ಲಿ
ಮೂಡಿಸುತ್ತಿದ್ದೆ ನಿರಂತರ
ನನ್ನ ಒಂದೊಂದೇ ಹೆಜ್ಜೆ ಗುರುತುಗಳ
ಅಂತರಂಗದ ಅನುಭವದ
ಒಂದೊಂದು ತುಣುಕನ್ನೂ ಬಿಡದೇ
ನೀಡುತ್ತಿದ್ದೆ ಇಡೀ ಲೋಕಕೆ
ಉಡುಗೊರೆಯಾಗಿ
ನಾನಿದ್ದುದಕ್ಕೆ ಸಾಕ್ಷಿ ಪುರಾವೆಗಳಾಗಿ
ಕಟೆದು ನಿಲ್ಲಿಸುತ್ತಿದ್ದೆ
ಸವ್ಯ ಸೂಚಿಗಳನು ಹೀಗೆಯೇ
ಬರಿದು ಮಾಡಿದೆ ಇಡೀ ರಾತ್ರಿಯನು
*****