ನನ್ನ ಪುಟ್ಟ ಕೆಂಪು ಹೃದಯದೊಳಗೆ
ಅದೆಷ್ಟು ನೋವಿನ ಲಂಗರುಗಳು
ಈ ಪುಟ್ಟ ಕಪ್ಪು ಕಣ್ಣುಗಳೊಳಗೆ
ಅದೆಷ್ಟು ನೀರ ಸಾಗರಗಳು.
ನನ್ನ ಪುಟ್ಟ ಮನೆಯ ಅಂಗಳದೊಳಗೆ
ಅದೆಷ್ಟೋ ಸೂರ್ಯನ ಬೆಳಕಿನ ಕಿರಣಗಳು,
ನನ್ನ ಪುಟ್ಟ ಗುಡಿಸಲ ಚಿಮಣಿ ದೀಪದೊಳಗೆ
ಅದೆಷ್ಟು ಬೆಳಕಿನ ಸೆಳಕುಗಳು ಮೂಡಿವೆ.
ಗಾಳಿಗೆ ಆರಿ ಹೋಗುವ ದೀಪಕ್ಕೆ
ನನ್ನದೇ ಮಣ್ಣ ಗುಡಿಸಲು ಆಸರೆಯಾಗಿದೆ.
ಲೋಕದಲಿ ಕೊನೆಯ ತನಕ ಉರಿಯುವ
ಯಾವುದಾದರೊಂದು ದೀಪ ಉಳಿದಿದೆಯೇ?
ಗುಟ್ಟುಗಳೆಲ್ಲಾ ಬಯಲಾಗುತ್ತವೆ ಇಲ್ಲಿಯೇ
ಗಾಢ ಮೌನವೂ ಮಾತಾಡುತ್ತದೆ ಇಲ್ಲಿಯೇ
ಮಾತಿಗೆ ಯಾಕೆ ಬೇಕು ಹೇಳಿ
ದೇಶ, ಕೋಶ, ಭಾಷೆ, ಶಬ್ದ, ಧ್ವನಿ,
ಧ್ವನಿಯಿಲ್ಲ, ಶಬ್ದವಿಲ್ಲ, ಲಿಪಿಯಿಲ್ಲ,
ನನ್ನ ಮೌನದ, ಕಣ್ಣಿನ ಭಾಷೆಗೆ
ಲೋಕದ ಭಾಷೆಗಳು ಸಾಟಿಯಿಲ್ಲ.
*****