ಎಷ್ಟೊಂದು ಆಸೆಯಿಂದ
ನೆಟ್ಟಿದ್ದೆ ಹೂ ಬಳ್ಳಿಯನ್ನು
ಮರಕ್ಕೆ ಬಳ್ಳಿಯ ಸೆರೆ
ಬಳ್ಳಿಗೆ ಮರವಾಸರೆ
ಮರ ಬಳ್ಳಿ, ಬಳ್ಳಿ ಮರ
ಬಂಧ ಅನುಬಂಧ
ಗಟ್ಟಿಯಾಗಿ ಶಾಶ್ವತವಾಗಿ
ನೂರ್ಕಾಲ ನಗಲೆಂದು
ಹೂವಾಗಿ ಕಾಯಾಗಿ ಹಣ್ಣಾಗಿ
ಅಸಂಖ್ಯಾತ ಬಳ್ಳಿಯಾಗಲೆಂದು,
ಆಸೆಗಳೆಲ್ಲಾ ಮರೀಚಿಕೆ
ಮರ ಬಳ್ಳಿ, ಬಳ್ಳಿ ಮರ
ಕೊಡಲಿಲ್ಲ – ಕಳೆಯಲಿಲ್ಲ
ಒಲಿಯಲಿಲ್ಲ ಒಂದಾಗಲಿಲ್ಲ
ಉತ್ತರ ಧ್ರುವ – ದಕ್ಷಿಣ ಧ್ರುವ
ಮರಕ್ಕೆ ತನ್ನದೇ ದರ್ಪ ದೌಲತ್ತು
ಬಳ್ಳಿಗೆ ಸದಾ ಅನುವು ಆಪತ್ತು
ಮರ ಬಾಗಲಿಲ್ಲ.
ಬಳ್ಳಿ ಮೇಲೇರಲಿಲ್ಲ
ಎರಡೂ ಸಮಾನಾಂತರ ರೇಖೆಗಳು
ಯಥೇಚ್ಛವಾಗಿದೆ ಗಾಳಿ, ನೀರು
ಗೊಬ್ಬರ ಬೆಳಕು
ಮರಕ್ಕೆ ಎಷ್ಟಿದ್ದರೂ ಸಾಲದು
ಬಳ್ಳಿಗೆ ಇದ್ದರೂ ಬೇಕಾಗದು
ಬಳ್ಳಿಗೆ ಮರದ ನೆರಳು
ನೆರಳಾಯಿತು ಕೊರಳಿಗೆ ಉರುಳು
ಮರ ಬಾಗಬೇಕು
ಬಳ್ಳಿ ಮೇಲೇರಬೇಕು
ಒಂದನ್ನೊಂದು ತಬ್ಬಿ ನಲಿಯಬೇಕು
ಬೆಳೆಯಬೇಕು ಮುಗಿಲೆತ್ತರ
ನನಸಾದೀತೇ ಕನಸಿನ ಗೋಪುರ.
*****