ಇದ್ದಾರೆ ಕಲಿಯುಗದಲ್ಲೂ
ಅಹಲ್ಯೆಯರು
ಆಧುನಿಕ ಅಹಲ್ಯೆಯರು
ಇಂದು ಎಂದು ಮುಂದೆಂದೂ
ಕೂಪ ಮಂಡೂಕಗಳಂತೆ
ಗಂಡ ಮನೆ ಮಕ್ಕಳು
ತಾವೇ ಕಟ್ಟಿಕೊಂಡ ಕೋಟೆಗೆ
ಬೀಗ ಹಾಕಿಸಿ ಬೀಗದ ಕೈ
ಗಂಡಂದಿರಿಗೆ ಕೊಟ್ಟು
ಸ್ವಾಭಿಮಾನವ ಮೂಲೆಗಿಟ್ಟು
ವ್ಯಕ್ತಿತ್ವವ ಅಡವಿಟ್ಟು
ಬದುಕುತ್ತಾರೆ ಉಂಡುಟ್ಟು
ಒಂದಿಷ್ಟು ಅನ್ನ ಮೈತುಂಬಾ ಚಿನ್ನ
ಐಷಾರಾಮದ ಜೀವನದೊಟ್ಟಿಗೆ
ಇರಲೇಬೇಕು ಮೂರ್ಖರ ಪೆಟ್ಟಿಗೆ
ಶಾಪಗ್ರಸ್ತ ಅಹಲ್ಯೆಯರಿವರು.
ಯಾವ ಕಾಲದ ರಾಮ ಬಂದರೂ
ಪ್ರತಿಕ್ರಿಯಿಸದ ಹೆಬ್ಬಂಡೆಗಳು
ಊರು ಕೊಳ್ಳೆ ಹೊಡೆದರೂ
ನಿಂತ ನೆಲವೇ ಕುಸಿದರೂ
ಶಿಲರೂಪದ ವನಿತೆಯರು
ಸ್ತ್ರೀ ವಿಮೋಚನೆ ಸ್ತ್ರೀಪರ ಕಾಳಜಿ
ಭಾಷಣಗಳಿಗಷ್ಟೇ ಸೀಮಿತ
ಎಡಗಿವಿಯಲ್ಲಿ ಕೇಳಿ ಬಲಗಿವಿಯಿಂದ ಬಿಟ್ಟು
ನಿರಾತಂಕವಾಗಿ ಮನೆ ಸೇರುವ
ಮುಗ್ಧ ಮುತ್ತೈದೆಯರು
ಹಲ್ಲಿಯಂತೆ ಲೊಚ್ಚಗುಟ್ಟಿ
ಪರಿತಾಪ ಪಶ್ಚಾತ್ತಾಪವಿಲ್ಲ
ಈಗಲ್ಲ ನಾಳೆಗಲ್ಲ ಮೂರು ನೂರು
ತಲೆಮಾರು ಕಳೆದರೂ
ಬದಲಾಗದ ನಾರೀಮಣಿಯರು.
*****