ಅಂಗಳದೆ ಆಡುವ ಅನುಜರ
ಕಂಡಾಗ ಅರಳುವ ಮನ
ಕ್ಷಣದೊಳಗೆ ಮುದುಡಿದ ತಾವರೆ
ಹಿಂದಡಿಯಿಟ್ಟ ನೆನಪಿನ ಬಂಡಿ
ಮಸ್ತಿಷ್ಕದೊಳಗೆ ಅಡಗಿದ
ರಸನಿಮಿಷಗಳ ಹುಂಡಿ
ಅಮ್ಮನ ಲಾಲಿ ಹಾಡಿನಷ್ಟೇ ಮಧುರ
ಬಾಲ್ಯದ ಸವಿನೆನಪುಗಳ ಹಂದರ
ಅಪ್ಪನಿಗೆ ಸಡ್ಡು ಹೊಡೆದು
ಹಿಂಬಾಗಿಲಿನಿಂದ ಜಾರಿ
ಗೆಳತಿಯರ ಹಿಂಡು ಸೇರಿ
ಆಡಿ ನಲಿದ ಆಟಗಳೆಷ್ಟು
ಕುಣಿದು ಕುಪ್ಪಳಿಸಿದ ದಿನಗಳೆಷ್ಟೋ
ಕುಂಟೆಬಿಲ್ಲೆ ಅಳುಗುಣಿ ಚೌಕಾಬಾರ
ಮುಗ್ಧ ಹೃದಯದ ಹಾಡಿನ ಪ್ರಸ್ತಾರ
ಎದ್ದು ಬಿದ್ದು ಕದ್ದು ಬಂದು
ಅಮ್ಮನ ಬೈಗುಳ ತಿಂದು ಹೊದ್ದು
ಮೂಲೆಯಲಿ ಸರಬರ ಸದ್ದು
ಅಮ್ಮನೇ ಸೋತು ಗುದ್ದು ಹಾಕಿ
ಮುದ್ದು ಮಾಡಿ ರಮಿಸಿ
ಕೈತುತ್ತು ತಿನಿಸುವಾಗಿನ ಕ್ಷಣ
ಮಡಿಲಲ್ಲಿ ಮಗುವಾಗಿ ಮಲಗಿದಂತೆ
ಜಗದ ಆಗುಹೋಗುಗಳೆಲ್ಲ ಸ್ತಬ್ಧವಾದಂತೆ.
*****



















