ಅಚ್ಚರಿಯ ನೋಟವದೇಕೆ
ನಿಟ್ಟುಸಿರ ಬಿಡುವಿರೇಕೆ
ಅರೆಗಳಿಗೆ ದಿಟ್ಟಿಸಿ ನೋಡಿರಿ
ಕಲಾವಿದನ ಕರಚಳಕದೆ
ಅವಿರ್ಭವಿಸಿದ ಕಲ್ಪನೆಯ ಚಿತ್ರವೇ
ದೇವನ ಸೃಷ್ಠಿಯ ವೈಚಿತ್ರವೇ
ಅಲ್ಲ ನಿಮ್ಮೆದುರು ನಿಂತಿರುವ
ನಾನೊಂದು ಬೋಳು ಮರ
ಗತ ಕಾಲದೆ ನಾನಾಗಿದ್ದೆ
ಫಲಭರಿತ ಸಂಪತ್ತಿನ ಆಗರ
ನನ್ನಡಿಯಲ್ಲಿ ನನ್ನೊಡಲಲ್ಲಿ
ಆಸರೆ ಪಡೆದ ಜೀವಿಗಳೆದೆಷ್ಟೋ
ಮುಗ್ಧ ಕಂದಮ್ಮಗಳು ನಕ್ಕು ನಲಿದು
ಕುಪ್ಪಳಿಸಿದ ದಿನಗಳೆಷ್ಟು,
ಅಶಾಂತಿಯಲಿ ಬೆಂದು ನೊಂದ
ಹೃದಯಗಳಿಗೆ ನೀಡಿದೆ ಸಾಂತ್ವನ
ನನ್ನುಸಿರ ಧಾರೆಯೆರೆದು
ನೀಡಿದೆ ಕ್ಷಣಕಾಲ ಚೇತನ
ಇಂದು ಸುಡು ಬಿಸಿಲು ಬಿರುಮಳೆಯಲಿ
ಕಾಲನಾಟದ ಆಟಿಕೆಯಾಗಿ
ಸ್ವಾರ್ಥ ಮಾನವನ ಕ್ರೌರ್ಯಕ್ಕೆ
ಸಾಕ್ಷಿಯಾಗಿ ಮೂಕವಾಗಿ
ಶೋಧಿಸುತಿಹೆನು ಏಕಾಂಗಿಯಾಗಿ.
*****