ಅಂದು ರಾತ್ರಿ ಮಲಗಿದವರು
ಏಳಲೇ ಇಲ್ಲ
ಕಳಚಿ ನಡೆದರು ದೂರ ದೂರ
ಬದುಕಿನ ಬವಣೆಗಳನ್ನೆಲ್ಲಾ.
ವರವೋ ಶಾಪವೋ ಅವರಿಗೆ ಭೂಕಂಪ
ಜನತೆ ತೋರುತಿದೆ ನಿಟ್ಟುಸಿರಿನ ಅನುಕಂಪ
ಕನಸನ್ನು ಕನಸಾಗಿಯೇ ಉಳಿಸಿ
ನಶ್ವರ ಬಾಳಿನ ಸತ್ಯವ ತಿಳಿಸಿ
ನಡೆದರು ದೂರ ಬಹು ದೂರ
ಗೊತ್ತು ಗುರಿ ಇಲ್ಲದ ತೀರ
ತಮ್ಮೆದೆಯ ಕುಡಿಗಳೇನಿತ್ತೋ
ಆಸೆ ಆಕಾಂಕ್ಷೆಯ ಹೊನಲೆಷ್ಟಿತ್ತೋ
ಅರಿಯುವರಾರು ಬಾಳಿನ ಗುಟ್ಟು
ಎಲ್ಲವನ್ನು ಉಳಿದವರಿಗಾಗಿ ಬಿಟ್ಟು
ನಡೆದರು ದೂರ ಬಹು ದೂರ
ಇಳಿಸಿ ಬದುಕಿನ ಭಾರ
ಕನಸುಗಳು ಕಮರಿದವು ಉಸಿರಿನೊಂದಿಗೆ
ಬಯಕೆಗಳೂ ಬೂದಿಯಾದವು ಚಿತೆಯೊಂದಿಗೆ
ನೋವು ನಲಿವುಗಳ ಬೇಲಿ ಕಿತ್ತೆಸೆದು
ನಡೆದರು ದೂರ ಬಹು ದೂರ
ಪಡೆದು ನೆಮ್ಮದಿಯ ತೀರ
*****