ಡೊಂಬರಾಟ ! ಡೊಂಬರಾಟ !
ಧನಿಯಮುಂದೆ ಡೊಂಬರಾಟ !

ಕೋಟೆಗೋಡೆ ಮಧ್ಯದಲ್ಲಿ
ಕಾಡುಕಿಚ್ಚು ಬಿಸಿಲಿನಲ್ಲಿ
ಹೊಟ್ಟೆ ಹಸಿದ ಹೊತ್ತಿನಲ್ಲಿ
ಒಳಗೆ ಒಳಗೆ ಒಡಲಿನಲ್ಲಿ !

ಡೊಂಬರಾಟ ! ಡೊಂಬರಾಟ !
ಧನಿಯಮುಂದೆ ಡೊಂಬರಾಟ !

ಪೊಳ್ಳು ಡೊಳ್ಳು ಢೋಲುಬಡೆದ !
ಕೂಗಿ ಕೂಗಿ ಕೇಕೆ ಹೊಡೆದ !
ಕರುಳುತಂತಿ ಮೇಲೆ ನಡೆದ !
ಜೋಲಿಹಿಡಿದು ಜೀಕಹೊಡೆದ !

ಡೊಂಬರಾಟ ! ಡೊಂಬರಾಟ !
ಧನಿಯಮುಂದೆ ಡೊಂಬರಾಟ !

ಹಾರಿ, ಇಳಿದು, ಹತ್ತಿ ದಣಿದ !
ತಿರುವು ಮುರುವು ಲಾಗಹೊಡೆದ !
ಕೈಯ, ಕಾಲು, ಕೀಲು ಮುರಿದ !
ಮುದುಡಿ, ಮುದುಡಿ ಮುದ್ದಿ ಯಾದ !

ಡೊಂಬರಾಟ ! ಡೊಂಬರಾಟ !
ಧನಿಯಮುಂದೆ ಡೊಂಬರಾಟ !

ಕೋಲಮೇಲೆ ನಿಂತುಕೊಂಡ !
ಮುಗಿಲಮೇಲೆ ಮಲಗಿಕೊಂಡ !
ಅತ್ತು ಅತ್ತು, ಅರಚಿಕೊಂಡ !
ಹೊಟ್ಟೆ ಹೊಟ್ಟೆ ಹೊಡೆದುಕೊಂಡ !

ಧನಿಯು ದುಡ್ಡು ಒಗಿಯಲಿಲ್ಲ!
ಡೊಂಬರಾಟ ಮುಗಿಯಲಿಲ್ಲ !!
*****