‘ದುಡಿಯುವ ಮಹಿಳೆ’
ಪಟ್ಟ – ಭದ್ರ
ನನಗಿಲ್ಲ.
‘ಕಸ ಮುಸುರೆಯವಳು’
ಅನ್ನುವ ಬಿರುದು ಮಾತ್ರ
ನನಗೆ.
ವಾರದ ರಜಾ ದಿನದಿಂದ
ಹೆರಿಗೆಯ ರಜೆಯವರೆಗೆ
ಯಾವ ರಜೆಯೂ
ನನಗಿಲ್ಲ.
ದಿಪಾವಳಿ- ಯುಗಾದಿಗೂ
ರಜೆ ಇಲ್ಲ – ಜಾಸ್ತಿ ಕೆಲಸ!
ಓಟಿ ಇಲ್ಲ – ಬೋನಸ್ ಇಲ್ಲ.
ಗ್ರಾಚ್ಯುಟಿ, ಪೆನ್ಷನ್ ಮಾತೇ ಇಲ್ಲ
ಏಕೆಂದರೆ, ನಾನು – ನನ್ನಂಥವರು
ರಿಟೈರಾಗುವುದೇ ಇಲ್ಲ;
ಯಾವಾಗಲೂ
ಡಿಸ್‌ಮಿಸ್ ಆಗುತ್ತೇವೆ.
*****
೦೪-೦೩-೧೯೯೨