ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ಮನ ಬೆವೆತೋಯ್ತು

ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ
ಹುಣ್ಣಿಮೆ ಚಂದ್ರ ಕೆಂಪಾದ
ಗುಡುಗು ಸಿಡಿಲು ಮಳೆ ಮಿಂಚು ಮೋಡ
ಒಂದಾಯಿತು ಕಳೆದಾಮೋದ

ಹರಡಿದ ಎಲ್ಲೂ ಇಬ್ಬನಿ ಮಾಲೆ
ಕೋಟಿ ಸೂರ್‍ಯರಿಗೆ ಮರುಜನ್ಮ
ಜೊತೆಗೇ ಬಂತು ಕೆಂಪು ಸುನಾಮಿ
ನೀಡುತ ಜಗಕೆ ಹೊಸ ಜನ್ಮ

ಕಪ್ಪು ಕೋಗಿಲೆ ಕೆಂಪಾಯ್ತು
ಸಂಭ್ರಮದಾ ನೆಲ ಕುಸಿದೋಯ್ತು

ಸಾವಿರ ಕನಸು ಸಾವಿರ ಮನಸು
ನವಿಲು ಕುಣಿಯಿತು ಕೋಗಿಲೆಗೆ
ಎದೆಯಲಿ ಹರ್‍ಷ ಹೊಸ ಉತ್ಕರ್‍ಷ
ಜಗ ಮುನ್ನಡೆಯಿತು ನವ ಶ್ರುತಿಗೆ

ತಗ್ಗು ದಿಣ್ಣೆ ಎಲ್ಲಿ ಹೋಯಿತೊ
ಮೂಡಿತು ಬದುಕಿಗೆ ಹೊಸ ಬಣ್ಣ
ಮಾಡಿದ ಮನಸಿಗೆ ಇಟ್ಟಽ ಹೆಜ್ಜೆಗೆ
ಬೆಲೆಽ ಬಂದಿತೊ ಓ ಅಣ್ಣ
*****