ಹಂಚಗೂಣಿ ಬೆಂಚಗೂಣಿ ಮುತ್ತಿನ ನಾಗುರಣಿ
ಕುಸುಮಲ್ಲಿ ಭೂದೇವಿಗೆ||
ಮುತ್ತಿನ ಬಟ್ಬಿಟ್ಟು ಮುತ್ತೈದೆಯರೆಲ್ಲಾ
ಎಣ್ಣಿ ಹೆಚ್ಚುನು ಬನ್ನಿಽರೆ ||೧||

ಗಂಜಿಽಯ ಸೀರ್‍ಯುಟ್ಟು ಗಂದಽದ ಬಟ್ಟಿಟ್ಟು
ಪಿಲ್ಲೆ ಕಾಲುಂಗರಿಟ್ಟಽ ||
ಮುಡಿಸಣ್ಣ ಮುತ್ತಿಽನ ನತ್ತನಿಟ್ಟವರೆಲ್ಲ
ಎಣ್ಣಿ ಹಚ್ಚುನು ಬನ್ಸಿಽರೆ ||೨||

ಚಿಕ್ಕಿಽಯ ಸೀರ್‍ಯುಟ್ಟು ಚಿಲಕಽದ ಬಟ್ಟಿಟ್ಟು
ಮೂಗಿಽಗಿ ಮೂಗತಿಟ್ಟವರ
ಜಾಳಿಗಿದಂಡೀ ಮುಡಿಯ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೩||

ಕಂಚೀನ ಬಟ್ಲಾಗ ಮಿಂಚೆಣ್ಣಿ ತಕ್ಕೊಂಡು
ಕೆಂಚೆರೊಂದೈವರಽ ||
ಕೆಂಚರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣೆ ಹಚ್ಚುನು ಬನ್ನಿಽರೆ ||೪||

ಬೆಳ್ಳಿಽಯ ಬಟ್ಲಾಗ ಎಳ್ಳೆಣ್ಣಿ ತಕ್ಕೊಂಡು
ನಲ್ಲೆರೊಂದೈವರಽ || I
ನಲ್ಲೆರೊಂದೈವರ ನೆರೆದ ಮುತ್ತೈದೇರ್‍ಯಾ
ಎಣ್ಣಿ ಹಚ್ಚುನು ಬನ್ನಿಽರೆ ||೫||

ಹೆವಳಸರ ಬವಳಸರ ಮ್ಯಾಲ ಮುತ್ತಿನ ಸರ
ತಾಯಿತ ಲ್ಯಾವಽಳ ||
ತಾಯಿಽತ ಲ್ಯಾವಳ ತಾಳಿ ಕಟ್ಟಿಽದವರ್‍ಯಾ
ಎಣ್ಣಿ ಹಚ್ಚುನು ಬನ್ಸಿಽರೆ ||೬||
*****

ಕನ್ಯೆಗೆ ಅರಿಷಿಣ ಹಚ್ಚುವ ವಿಧಾನದ ಹಾಡಿದು.

ಛಂದಸ್ಸು:- ತ್ರಿಪದಿ.

ಶಬ್ದ ಪ್ರಯೋಗಗಳು:— ಕುರುಣೆ=ಮುಡಿಗೆ ಬಿಗಿಯುವ ಉಣ್ಣೆಯ ದಾರ. ಹಂಚಗೂಣಿ= ಹಚ್ಚಗಿನ ಕುರುಣೆ. ಬೆಂಚ(ಕೆಂಚ) ಗೂಣಿ=ಕೆಂಪು ಬಣ್ಣದ ಕುರುಣೆ. ನಾಗರುಣಿ=ನಾಗರ ಹಾವಿನಂತೆ ಜೋಲುವ ಕುರುಣೆ (ಇದು ಒಂದು ಅಭರಣವಾಗಿರಲೂ ಬಹುದು).ಕುಸುವಲ್ಲಿ=ಹೂವಿನಂಥವಳು.ಭೂದೇವಿ=ಮದುಮಗಳು. ಚಿಲಕ=ತಿಲಕ. ಕೆಂಚ್ಯಾರು-ಕೆಂಪುಮೈಯವರು.ಲ್ಯಾವಳ=ಗೋಪು.