ಚಂದ್ರ ಕಾಯುತ್ತಾನೆ ರಾತ್ರಿಗಾಗಿ
ಹಗಲು ಅವನಿಗೆ ಬೆಲೆಯಿಲ್ಲ
ಸೂರ್‍ಯ ಕಾಯುತ್ತಾನೆ ಹಗಲಿಗಾಗಿ
ರಾತ್ರಿ ಅವನಿಗೆ ಹುಗಲಿಲ್ಲ
ಭೂಮಿ ಕಾಯುತ್ತಾಳೆ ಈ ಇಬ್ಬರಿಗಾಗಿ
ಸರಿದಿಯಲ್ಲಿ ಬರುವ ಈ ಪ್ರಿಯಕರರ ಪಾಳಿಗಾಗಿ
ಒಬ್ಬನದೋ ಪ್ರಖರ ಪುಂಜಧಾರೆ
ಇನ್ನೊಬ್ಬ ಅಮೃತ ಸಿಂಚನದ ಶಿಖರ
ಮೀರೆ ಈ ಇವಳಿಗೆ ಸಡಗರ ಸಂಭ್ರಮ
ಅಮಾವಾಸ್ಯೆಗೊಮ್ಮೆ ಮೈ ನಡುಕ
ಇಬ್ಬರಲಿ ಒಬ್ಬನ ಪತ್ತೆಯೇ ಇಲ್ಲ.
ಸದ್ಯ ಸೂರ್‍ಯನಿಗಿಲ್ಲ ಅಮಾವಾಸ್ಯೆ ನಿಟ್ಟುಸಿರು!
ಹೀಗೆ….. ಸೂರ್‍ಯಚಂದ್ರರ ಕಡೆಗೇ ಕಣ್ಣಾಗಿ
ಬಾಯಿ ಬಿಡುವ ಇವಳ ಅಂತರಂಗ ಪಿಸುಗುಟ್ಟಿತು
ನಿನ್ನೊಳಗೇ ನಾನಿದ್ದೇನೆ ಬೆಂಕಿ ಬೆಳಕು ಲಾವಾ
ಹರಿಯ ಬಿಡು ಹೊರಗೆ
ಅರಿವಾಗಲಿ ಅವರಿಗೆ
ಹಾಗೆಂದೇ ಈಗೀಗ ಇವಳೂ ನಡುಗುತ್ತಾಳೆ
ಗುಡುಗುತ್ತಾಳೆ ಬಾಯಿ ತೆರೆಯುತ್ತಾಳೆ ಬೆಂಕಿ
ಹರಿಸುತ್ತಾಳೆ ಆದರೂ ಮೆರೆಯುತ್ತಾಳೆ
ಕ್ಷಮಯಾ ಧರಿತ್ರಿ.
*****