ಕೋಗಿಲೆ ಕೆಂಪಾಯ್ತು
ಹಾಡು ರಂಗಾಯ್ತು
ತಗ್ಗು ದಿಣ್ಣೆಗಳ ಹಲ ಕಾಲದ ಸೀಮೆ
ಒಡೆದು ಚೂರಾಯ್ತು

ಮೂಡಣದಲಿ ಸೂರ್‍ಯ
ಹೊಸ ಬೆಳಕನು ತಂದ
ಕತ್ತಲುಂಡ ಹಳೆ ಜಗದ ಮಂದಿಗೆ
ಹೊಸ ಜಗವ ತೆರೆದ

ಬೆಳದಿಂಗಳ ಚಂದ್ರ
ಓಕುಳಿಯನು ಎರೆದ
ಭ್ರಷ್ಟವಾದ ನೂರೊಂದು ಬಣ್ಣಕೆ
ಹೊಸ ಭಾಷ್ಯ ಬರೆದ

ಮುಂಗಾರ್‍ಮಳೆ ಧಾರೆ
ಸುರಿಯಿತು ಎಲ್ಲೆಲ್ಲು
ಹನಿಗಾಣದ ಬಿರುಬಿಸಿಲ ಸೀಮೆಗೂ
ತಂದಿತು ಹೊಸ ಸೊಲ್ಲು

ಎಲ್ಲೆಲ್ಲೂ ಚಿಗುರು
ನೆಮ್ಮದಿಯಾ ಉಸಿರು
ಕಂಡ ಕನಸು ನನಸಾಗಿ ಮೂಡಿರೆ
ಎದೆಯೆಲ್ಲಾ ಹಸಿರು
*****