ಗೋಧೂಳಿ ನಗಿಯಾಗ
ಬೆಳ್ಳಿ ಚುಕ್ಕಿ ಹಾಡೋ
ಹಾಡಿಗೆ ತೂಗ್ಯಾವೊ
ಭೂಮಿ ತಾಯ ಒಡಲು

ಒಡಲ ದನಿಯ ಕೇಳಿ
ಮುಗಿಲ ಮಾಳಿಗೆಯ
ಹತ್ತಿ ಇಳಿದು ಗಿಡ ಹೂ
ಚಿಗುರಿ ಬಳುಕಿ ಹಾವು

ಬಳ್ಳಿ ಆಗಸವ ಮುಟ್ಟಿ
ತಾರೆ ಜೋಡಿ ಮೋಡಿ
ಮಾಡಿ ಹನಿದಾವು
ಮುತ್ತುಗಳ ಸಾಲು ಸಾಲು

ತೆರೆದು ಬಾಗಿಲ ಬಳಿ
ಬಂದು ಹೋಕ್ಯಾನ
ಸೂರ್ಯ ಏಳು ಕುದುರಿ ಏರಿ
ಅವಳ ಗಲ್ಲಕೆ ಮುತ್ತಿಟ್ಟಾನ

ಜೋ ಜೋ ಆಡುತ
ಜೋಗುಳ ಹಾಡುತ
ರಂಗುರಂಗಿನ ಕನಸು ಹಚ್ಚಾನ
ಕಾಮನಬಿಲ್ಲು ಹೂಡ್ಯಾನ
*****