ಹಾಲಿಂದ ಮಾಡಿದರೊ
ನಿನ್ನ ಮಲ್ಲಿಗೆ ಹೂವಿಂದ ಮಾಡಿದರೊ
ಈ ಇಂಥ ಅಂದವ ಹೇಗೆ ಮಾಡಿದರೋ

ಕಸ್ತೂರಿಯಿಂದ ಮಾಡಿದರೊ
ಚಂದನದಿಂದ ಮಾಡಿದರೊ
ಪಾರಿಜಾತದ ಗಂಧದಿಂದ ಮಾಡಿದರೊ
ಈ ಮೈಯ ಸೌಗಂಧವ ಹೇಗೆ ಮಾಡಿದರೋ

ಬಿದಿರೆಲೆಯಿಂದ ಮಾಡಿದರೊ
ಕಬ್ಬಿನ ಕದಿರಿಂದ ಮಾಡಿದರೊ
ಕಾಮನ ಬಿಲ್ಲಿಂದ ಮಾಡಿದರೊ
ಈ ಹುಬ್ಬಿನ ಸೊಬಗ ಹೇಗೆ ಮಾಡಿದರೋ

ನೀಲ ನಭದಿಂದ ಮಾಡಿದರೊ
ಮಳೆಗಾಲದ ಮುಗಿಲಿಂದ ಮಾಡಿದರೊ
ನಟ್ಟಿರುಳ ದಿಗಿಲಿಂದ ಮಾಡಿದರೊ
ಈ ಹೆರಳ ನಿಧಿಯ ಹೇಗೆ ಮಾಡಿದರೋ

ಎಳೆ ಸೂರ್ಯನ ಬೆಳಕಿಂದ ಮಾಡಿದರೊ
ಎಳೆ ಮಾವಿನ ಚಿಗುರಿಂದ ಮಾಡಿದರೊ
ಹವಳ ಮಾಣಿಕ್ಯದಿಂದ ಮಾಡಿದರೊ
ಈ ಅಧರದ ಕೆಂಪ ಹೇಗೆ ಮಾಡಿದರೋ

ಮಿಂಚಿನ ಸಳಕಿಂದ ಮಾಡಿದರೊ
ನವಿಲಿನ ಗರಿಯಿಂದ ಮಾಡಿದರೊ
ಕಡಲಾಳದ ಮೀನಿಂದ ಮಾಡಿದರೊ
ಈ ಕಣ್ಣ ಕಾಂತಿಯನ್ನು ಹೇಗೆ ಮಾಡಿದರೋ

ಗಾಳಿಗಲ್ಲಾಡುವ ಗೋಧಿಯ ಹೊಲದಂಥ
ಸಣ್ಣಕೆ ಸುಳಿಯುವ ನೀರಿನ ತೆರೆಯಂಥ
ಸುಮ್ಮನೆ ಸುರಿಯುವ ತಿಂಗಳಿನಂಥ
ಈ ಇಂಥ ಚೆಲುವ ಹೇಗೆ ಮಾಡಿದರೋ
ಈ ಇಂಥ ಅದ್ಭುತವ ಹೇಗೆ ಮಾಡಿದರೋ
*****