ಬೆಂಗಳೂರೆಂಬ ಪಟ್ಟಣದಲ್ಲಿದ್ದ ರಾಜಕುಮಾರ ಬಡಿಗೇರ, ಜಯಪ್ಪ, ಶಂಕರ್‌ ಗುಡಿಮನಿ- ಮೂವರು ಸೇರಿ ತಮ್ಮಳ್ಳಿಗೆ ಮಕರ ಸಂಕ್ರಾಂತಿ ಹಬ್ಬಕ್ಕೆ ಕಾರಿನಲ್ಲಿ ತೆರಳಿದರು.

ಹಳ್ಳಿಯಲ್ಲಿ ಬಾಲ್ಯದ ಗೆಳೆಯ ಲಕ್ಷ್ಮಣ ಪಾತ್ರೋಟನೊಂದಿಗೆ ಹೊಲ, ಗದ್ದೆ, ತೋಟ, ಹಳ್ಳ, ಕೊಳ್ಳ, ಬಾವಿ ಸುತ್ತಲು ಹೋದರು.

ಅಲ್ಲೊಂದು ಹಳ್ಳದ ಪೊದೆಯಲ್ಲಿ ಅಸ್ಥಿಪಂಜರವೊಂದು ಬಿದ್ದಿತ್ತು. ಎಲ್ಲರೂ ಅದನ್ನು ನೋಡಿ ದಂಗುಬಡಿದು ಹೋದರು.

ಅದಕ್ಕೆ ಲಕ್ಷ್ಮಣ ಪಾತ್ರೋಟ್ ಹೇಳಿದ ‘ಗೆಳೆಯರೆ… ಆ ಆಸ್ಥಿಪಂಜರದ ಗೊಡವೆ ನಮಗೇಕೆ? ನಾಳೆ ಸಂಕ್ರಾಂತಿ ಹಬ್ಬವಿದೆ. ಸ್ನಾನ, ಪೂಜೆ, ಕಬ್ಬು, ಸಿಹಿಗೆಣಸು, ಅವರೆಕಾಯಿ, ನೆಲಗಡಲೆ, ಹೂವುಹಣ್ಣು, ಬೂದುಗುಂಬಳಕಾಯಿ ಇತ್ಯಾದಿ ಹೊತ್ತು ಹೋಗುವ, ಅದನ್ನು ಅಲ್ಲೇ ಬಿಸಾಕಿ ಅದರ ಸುದ್ದಿಗದ್ದಲ ನಮಗೇಕೆ?’ ಎಂದು ಕೈಮುಗಿದು ನಿಂತ.

ರಾಜಕುಮಾರ್‌ ಬಡಿಗೇರ ಆ ಆಸ್ಥಿಪಂಜರವನ್ನೆಲ್ಲ ಫೂನರ್‌ ನಿರ್ಮಾಣ ಮಾಡಿ ಸಂಭ್ರಮಿಸಿದ.

‘ನಾನೇನು ಕಡಿಮೆನೇ…’ ಎಂದು ಶಂಕರ್ ಗುಡಿಮನಿ ಅದಕ್ಕೆ ರಕ್ತ, ಮಾಂಸ, ಆಕಾರ ನೀಡಿಯೇ ಬಿಟ್ಟ!

ಆಹಾ ಅದಕ್ಕೆ ಉಸಿರು ಜೀವ ತುಂಬಿದ ಜಯಪ್ಪ!

ಅಬ್ಬಾ! ಪಿಶಾಚಿಯೊಂದು ಭೂಮಿ ಆಕಾಶದೆತ್ತರ ಎದ್ದು ನಿಂತು- ‘ನನ್ನ ಬದುಕಿಸಿದವರ್‍ಯಾರು? ಮೊದಲು ಅವರನ್ನು ನುಂಗಿ ಬಿಡುವೆ’ ಎಂದು ಮೂವರನ್ನು ನುಂಗಿ ನೀರು ಕುಡಿಯಿತು.

ಇತ್ತ ಪರಿಣಾಮದ ಅರಿವು ಊಹಿಸಿ ಆಗಲೆ ಊರ ಕಡೆ ಓಟ ಕಿತ್ತಿದ್ದ… ಲಕ್ಷ್ಮಣ ಪಾತ್ರೋಟ ಮಹಾ ಬುದ್ಧಿವಂತನೆನಿಸಿದ್ದ!

ಹಳ್ಳಿ ಮನುಷ್ಯ… ಓಡೋಡಿ ಮನೆ ಸೇರಿದ್ದ!
*****