ಕಲ್ಲಿನಂತೆ ಪೆಡಸು
ಹುಲ್ಲಿನಂತೆ ಬೆಳಸು

ಕಪ್ಪುಗುರುಳು
ಗಂಡುಗೊರಳು
ಉರಿವ ಸೀಗೆ
ಕಾವ ಸೋಗೆ

ಪುಣ್ಯಕೋಟಿ ಹೃದಯ
ಚಂಡವ್ಯಾಘ್ರ ಅಭಯ

ರೊಚ್ಚು ಕೆಚ್ಚು
ಅಚ್ಚುಮೆಚ್ಚು
ನಾನವಳ ಪಡಿಯಚ್ಚು

‘ತಾಯಿ ದುರ್ಗೆಯ ನಿಜವನರಿಯುವ
ಧೀರರಾರೊ ಜಗದೊಳು!
ಆರು ದರುಶನ ವೇದ ಶಾಸ್ತ್ರ
ಪುರಾಣವರಿಯದು ಅವಳನು’

ಈ ಹೊತ್ತಿಗೂ
ಬಸಿರಗೊಳದೊಳು
ಕಳ್ಳುಬಳ್ಳಿಗಾತು
ಜೀವಜಲದಲಿ ಹೂತು
ಬಲಿದು ಮಿಸುಕಾಡಿ ಒದ್ದು
ಸುಖ ನಿದ್ದೆಗೈವ ಮುಗುಳು

ನಾನವಳ ಕಣ
ಮಣ ಭಾರ ಋಣ.
*****