ಅಂದು ಆಡಿ ಏನು
ನಾವೇ ಮಾಡ್ಕೊಂಡು
ಲೋಕ ಕಾಣದ್ದೂಂತ
ಗೆಜ್ಜೆ ಕಟ್ಕಂಡು ಕುಣಿದೆ
ದಿನಕೊಂದು ಚೆಂದಮಾಡ್ದೆ
ಮಟ್ಟಿ ತಾಗಿ ಕೆಟ್ಟಾನಂತ
ರೆಪ್ಪೆಲಿಟ್ಟು ಜೋಕ ಮಾಡ್ದೆ
ಮುಗಿಲು ಮುಟ್ಟುತ್ತಿತ್ತು.
ಬೆಳಯೋತನಕ ಮಕ್ಕಳು
‘ಆಮೇಲೆ ಯಾರ ಮಕ್ಕಳೋ’ ಅನ್ನೋದೆ ಮರೆತೆ
ಎಗ್ಗು ತಗ್ಗು ಇಲ್ದೆ ಬೆಳೆದ
ಹುಡುಗ! ಅಂದೆ
ಒಂದು ದಿನ ಯಾವಳನ್ನೋ ಇಡಕೊಂಡೆ ಬಂದ
ನಿಮ್ಮ ಬಣವೆಗೆ ಬೆಂಕಿ ಇಕ್ಕಿದ
ಮಗ ಅಲ್ಲ! ಅಂತ ತಾಳಿಕೊಂಡೆ
ಆಸ್ತಿ, ಅಧಿಕಾರ ಕಿತ್ಕೊಂಡ
ರಾಜ ಆದ
ನೀವೂ ನಿಮ್ಮದ್ಯಾವುದೂ ತೂಕವಾಗಲಿಲ್ಲ.
ಬರು ಬರುತ್ತ
‘ಬಗಳಿದರೆ ಉಂಟು
ಇಲ್ಲದಿದ್ದರೆ ಇಲ್ಲ’ ಅನ್ನಂಗಾತು
‘ಕಾಲಧರ್ಮ’ ಅಂತ ನುಂಗಿಕೊಂಡಿರಿ
ಎಲ್ಲಿಗೆ ತೇಲಿತು ಅಂದರೆ
ತೊತ್ತಿಗೂ ಬೇಡ! ಅನ್ನಿಸಿತು ನಿಮ್ಮ ಜನ್ಮ.
ಅತ್ತಿರಿ, ಕರೆದಿರಿ,
ಹೇಳಿಸಿದಿರಿ, ಪಂಚಾಯಿತಿ ಮಾಡಿಸಿದಿರಿ
ಏನು ಬಂತು
ಒಳಗಿಲ್ಲದಿದ್ದರೆ?
‘ಗಂಡ ಕಾಡಿಸಲಿಲ್ಲ
ಅತ್ತೆ ಮಾವ ಪೀಡಿಸಲಿಲ್ಲ
ಇವ ಹೊಟ್ಟೆಗುಟ್ಟಿದವ ಎಲ್ಲಾ ಚುಕ್ತ ಮಾಡಿಬಿಟ್ಟ
ಕೆಟ್ಟವ ಇವನ ಸಂಗಡ ಯಾರು ಅಂತ’
ಮಗಳೊಬ್ಬಳ ಮನೆ ಸೇರಿಕಂಡ್ತು ಮುದುಕಿ.
ನೀನು-
‘ಮಗನ್ನ ಹಡೆದು
ಬೇರೆಯವರ ಹತ್ತಿರ ಹೋಗೋದೆ?
ಅದೂ! ಬಾಳಿ ಬದುಕಿ’ ಅಂತ ಉಳಿದೆ
ಇಗ!
ಅಡವಿ ಹುಲ್ಲು ಮಡಗಿನ ನಿರಾತು
ನೀನಾತು!
*****