ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು

ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು

ಈ ವಿಷಯವನ್ನು ಕುರಿತು ಮಾತನಾಡುವ ಮೊದಲು ಎರಡನೇ ಮಹಾಯುದ್ದ ನಡೆದ ಕಾಲದಲ್ಲಿ ಉಪಯೋಗಿಸಿದ ರಣತಂತ್ರಗಳ ಬಗ್ಗೆ ನನ್ನ ಮನಸ್ಸು ಆಲೋಚಿಸುತ್ತಿದೆ. ಎರಡನೇ ಮಹಾಯುದ್ದದಲ್ಲಿ ಸೈನಿಕ ಶಕ್ತಿಯನ್ನು ಎದುರಿಸುವುದೊಂದೇ ಗುರಿಯಾಗಿರಲಿಲ್ಲ. ಸಮಾಜಗಳು ಇನ್ನೊಂದು ಸಮಾಜವನ್ನು ಆಥವಾ ಒಂದು ಸಮೂಹ, ಮತ್ತೊಂದು ಸಮೂಹವನನ್ನೂ ಆಧೀನಕ್ಕೊಳಪಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದ್ದವು. ರಾಸಾಯನಿಕ, ಭೌತಿಕ, ದೈಹಿಕ, ಮಾನಸಿಕ – ಹೀಗೆ ಎಲ್ಲಾ ನೆಲೆಗಳಲ್ಲಿಯೂ ಪ್ರಯೋಗಗಳನ್ನು ಮಾಡಲಾಗುತ್ತಿತ್ತು. ಆರ್‍ಥಿಕ ಹತಾಶೆ ಮತ್ತು ಸಾಮಾಜಿಕವಾಗಿ ಭವಿಷ್ಯವಿಲ್ಲದಿರುವುದು ನಿಧಾನವಾಗಿ ಫ್ಯಾಸಿಸ್ಟ್ ಶಕ್ತಿಗಳ ಉದಯಕ್ಕೆ ದಾರಿ ಮಾಡಿಕೊಟ್ಟವು. ಪ್ರಭುತ್ವದ ನಿಜವಾದ ಅರ್‍ಥದಂತೆ ಅಧಿಕಾರ, ಶಕ್ತಿಗಳ ಕೇಂದ್ರೀಕರಣಕ್ಕೆ ಇದು ಕಾರಣವಾಯಿತು. ಭೌತವಸ್ತು ಅಥವಾ ಜೀವ ಎರಡೂ ಒಂದೇ ಎಂಬಂತೆ ಪ್ರಯೋಗ ಪಶುಗಳಾದವು. ಅವನ್ನು ಅಧಿನಿಯಮಗಳಡಿಯಲ್ಲಿ ತಂದು ಹೇಗೆ ನಿರ್ವಹಣೆ ಮಾಡಬೇಕೆಂದು ಫ್ಯಾಸಿಸ್ಟ್ ಅಧಿಕಾರವರ್ಗ ಚಿಂತಿಸುತ್ತಿತ್ತು.

ಈ ದೊಡ್ಡ ಭಿತ್ತಿಯನ್ನು ಆಯ್ದುಕೊಳ್ಳುವುದು ನನ್ನ ಗುರಿಯಲ್ಲ. ಫ್ಯಾಸಿಸ್ಟ್ ಆನುಸರಿಸುತ್ತಿದ್ದ ಎಷ್ಟೋ ಉಪಾಯಗಳಲ್ಲಿ ಮಾನಸಿಕ ಆಕ್ರಮಣಶೀಲತೆಯ ನೀತಿಯೂ ಒಂದಾಗಿದ್ದಿತು. ಅದರ ಕಡೆಗೆ ಗಮನ ಹರಿಸಿದಾಗ, ಆ ನೀತಿಯು ದೈಹಿಕ ಆಕ್ರಮಣಶೀಲತೆಯ ಸ್ವರೂಪಕ್ಕಿಂತ ಭಿನ್ನವಾದುದು. ಮೇಲ್ನೋಟಕ್ಕೆ ಕಾಣುವ ಕ್ರೌರ್‍ಯವು ಇಲ್ಲಿ ಮರೆಯಾಗಿರುತ್ತದೆ. ತಣ್ಣನೆಯ ಆಕ್ರಮಣ ಮಾಡುವ ಈ ನೀತಿ ಶತ್ರು ದಮನವನ್ನು ತುಂಬ ಶಕ್ತಿಯುತವಾಗಿ ಮಾಡಿ ಮುಗಿಸುತ್ತದೆ. ಬ್ರೈನ್‍ವಾಶ್ ತಂತ್ರವೂ ಅಂತದೊಂದು ತಂತ್ರ. ವ್ಯಕ್ತಿಯ ವ್ಯಕ್ತಿತ್ತದ ಛಾಯೆಗಳನ್ನು ಮರೆಯಾಗಿಸುವ ಆ ತಂತ್ರ ತಮಗೆ ಬೇಕಾದ ಭಾವನೆಗಳನ್ನು ಪದೇ ಪದೇ ಭೋಧಿಸುತ್ತಿದ್ದರೆ, ವ್ಯಕ್ತಿ ತನಗರಿವಿಲ್ಲದಂತೆ ತನ್ನ ಸ್ವಂತಿಕೆ, ಸತ್ವಗಳು ಮರೆತುಹೋಗಿ, ತನ್ನನ್ನು ಯಾರು ನೋಡಿಕೊಳ್ಳುತ್ತಾರೆಯೋ ಅವರಂತೆ ಯೋಚಿಸಲು ಶುರು ಮಾಡುತ್ತಾನೆ. ಇನ್ನೊಂದು ಪದದಲ್ಲಿ ಹೇಳುವುದಾದರೆ, ಕ್ಕೆಗೊಂಬೆಯೆನ್ನಬಹುದು. ಇದು ಬಗ್ಗೆಸುವಿಕೆಯ ತಂತ್ರ. ನಿಶ್ಚೇಷ್ಟಿತನಾದ ವ್ಯಕ್ತಿಯನ್ನು ಆಡಿಸುವ ಅಧಿಕಾರ ರಾಜಕಾರಣದ ಗುರಿ ಈ ಮಟ್ಟಿಗೆ ನೆರವೇರಿದಂತಿತ್ತು.

ಸ್ಟಾಲಿನ್ ಆಥವಾ ಮಾವೋ ಕಾಲದ ಸಮಾಜದ ಸ್ಥಿತಿಗತಿಗಳನ್ನು ಗಮನಿಸಿದರೆ, ಸಮಾಜವನ್ನು ಹಿಡಿತದಲ್ಲಿಟ್ಟುಕೊಳ್ಳುವ ಸಲುವಾಗಿ ಎಲ್ಲಾ ರೀತಿಯ ಅಸ್ತ್ರಗಳನ್ನೂ ಬಳಸಿದ ಪ್ರಭುತ್ವದ ಅಧಿಕಾರವನ್ನು ಕಾಣುತ್ತೇವೆ. ಅದರಲ್ಲಿಯೂ ಮಾನಸಿಕ ಆಕ್ರಮಣಶೀಲತೆಯು ಒಂದು ಪ್ರಬಲ ಅಸ್ತ್ರವಾಗಿ ಬಳಕೆಗೊಂಡಿದ್ದನ್ನು ಕಮ್ಯುನಿಸ್ಟ್ ಸಮಾಜಗಳಲ್ಲಿ ಕಾಣುತ್ತೇವೆ.

ಆರ್ವೆಲ್‍ನ ‘ಅನಿಮಲ್ ಫಾರಂ’ ಕಾದಂಬರಿಯು ಒಂದು ರಾಜಕೀಯ ವಿಡಂಬನೆಯಾಗಿದ್ದು, ಮಾನಸಿಕ ಆಕ್ರಮಣಶೀಲತೆಯ ಬಗ್ಗೆ ಕೆಲವು ಸುಳಿವುಗಳನ್ನು ಕೊಡುತ್ತದೆ. ಪ್ರಾಯಶ್ಚಿತ್ತದ ತುರ್ತಿಗೆ ಅಧೀನ ಪ್ರಾಣಿಗಳನ್ನು ತಂದು ನಿಲ್ಲಿಸುವ ನೆಪೋಲಿಯನ್ ಎಂಬ ಆಳುವ ವರ್ಗದ ನಾಯಕ ಹಂದಿ ವ್ಯವಸ್ಥಿತವಾಗಿ ತನ್ನ ವಿರುದ್ದ ಯಾರೂ ದನಿಯೆತ್ತದಂತೆ ಮಾಡುತ್ತದೆ. ಪ್ರಾಣಿಗಳೆಲ್ಲ ಒಂದೊಂದಾಗಿ ಬಂದು ತಮ್ಮ ಗಿಲ್‌ಟ್‌ಗಳನ್ನು ನಿವೇದಿಸಿಕೊಳ್ಳುತ್ತಾ ಹೋಗುತ್ತವೆ. ಅದಕ್ಕೆ ಪ್ರತಿಯಾಗಿ ಸಾವಿನ ಶಿಕ್ಷೆಯನ್ನು ಪಡೆಯುತ್ತವೆ. ತಮ್ಮ ಆಪರಾಧೀಭಾವಕ್ಕೆ ಶಿಕ್ಷೆಯೆಂದರೆ ಸಾವು ಮಾತ್ರ ಎಂದು ನಂಬಿಕೊಳ್ಳುವಂತೆ ಈ ಘಟನೆ ನಡೆಯುತ್ತದೆ. ಭಯ ಭೀತರಾದ ಅವು ಮಾನಸಿಕ ದೌರ್‍ಬಲ್ಯದಿಂದ ನರಳುತ್ತಿರುತ್ತವೆ. ಆದರೆ ಈ ಎಲ್ಲಾ ಕ್ರಿಯೆಗಳನ್ನೂ ನಾಯಕ ತುಂಬ ನಿರ್ಲಿಪ್ತವಾಗಿ ವೀಕ್ಷಿಸಿ, ಮೌನದಲ್ಲಿ ಹೊರಟು ಹೋಗುತ್ತಾನೆ. ಅದರಂತೆ ಒಂದು ಮಾನಸಿಕ ಅಧೀನತೆಯ ಪ್ರಕರಣ ಮುಂದಿನ ಎಚ್ಚರಿಕೆಯಾಗಿ ನಿಲ್ಲುತ್ತದೆ.

ಮಹಿಳೆಯರ ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳನ್ನು ಒಳಹೊಕ್ಕು ನೋಡುವ ಮುನ್ನ ಈ ಮಾನಸಿಕ ಆಕ್ರಮಣಶೀಲತೆಯ ಸ್ವರೂಪಗಳು ನಮ್ಮ ಕಣ್ಣ ಮುಂದೆ ಬಂದರೆ ಒಳ್ಳೆಯದು ಎನ್ನಿಸಿತು. ಏಕೆಂದರೆ, ಆಕ್ರಮಣಶೀಲತೆಯ ಅಲಗು ಎಷ್ಟು ಚೂಪಾಗಿದೆ ಮತ್ತು ಆದು ಎಷ್ಟು ಆಳದ ಗಾಯು ಮಾಡಬಲ್ಲುದು. ಪುರಾವೆಗಳಿಲ್ಲದೆ, ರಕ್ತಮಾಂಸಗಳನ್ನು ಹೊರಚೆಲ್ಲದೆ, ಒಳಪೆಟ್ಟುಗಳನ್ನಿಟ್ಟು ಜೀವ ಹಣ್ಣಾಗುವಂತೆ ಮಾಡಬಲ್ಲ ಗಾಯದ ವಿಧಾನಗಳನ್ನು ಅರಿಯುವುದು ಒಳ್ಳೆಯದು. ಮಾನಸಿಕ ಆಕ್ರಮಣಶೀಲತೆ ನಮ್ಮ ಸಮಾಜದಲ್ಲಿ ಹೆಚ್ಚಾಗಿ ಪ್ರಯೋಗಿಸಲ್ಪಡುತ್ತಿರುವುದು ಅಧೀನವರ್‍ಗಗಳಲ್ಲಿ ಒಂದೆನಿಸಿದ ಮಹಿಳೆಯ ಮೇಲೆ. ಬ್ರೈನ್‍ವಾಶ್ ತಂತ್ರಗಳು ಯಶಸ್ವಿಯಾಗಿ ಪ್ರಯೋಗಗೊಳ್ಳುತಿರುವುದು ಆವಳ ಮೇಲೆಯೇ. ಪುರುಷ ಪ್ರಧಾನ ಸಮಾಜವು ನೈತಿಕತೆಯನ್ನು ಆಧರಿಸಿ ಕಟ್ಟಲ್ಪಟ್ಟಿದೆ ಎಂಬುದಾಗಿ ಅದರ ಸಮರ್ಥಕರು ಹೇಳುತ್ತಿರುತ್ತಾರೆ. ಆದರೆ ಸಾಮಾಜಿಕವಾಗಿ, ನೈತಿಕವಾಗಿ ವ್ಯಕ್ತಿಯನ್ನು ಇನ್ನಿಲ್ಲದಂತೆ ಉಪಯೋಗಿಸಿಕೊಳ್ಳುವ, ತಾನು ಹೇಳಿದಂತೆ ಕೇಳುವಂತೆ ಮಾಡುವ ಶಕ್ತಿಯನ್ನು ಅದು ಕೇಂದ್ರೀಕರಿಸಿಕೊಂಡಿದೆ.

ಹೀಗಿರುವಾಗ, ಸಂವೇದನೆಯೆಂಬ ಪದವನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಿ, ಒಪ್ಪಿಕೊಳೃಬೇಕಾಗುತ್ತದೆ. ಫ್ಯಾಸಿಸ್ಟ್ ಪ್ರಭುತ್ವಗಳು ರೂಪಿಸಿದ ನಿಯಮಗಳಲ್ಲಿ ಇಗೋ ಎನ್ನುವುದನ್ನು ವೈಯಕ್ತಿಕದಿಂದಾಚೆ ಅತೀತವಾಗಿ, ಜಗತ್ತಿನ ಪ್ರಜ್ಞೆಗಳಲ್ಲಿ ಒಂದೆಂದು ಗುರುತಿಸಿಕೊಳ್ಳಬೇಕೆಂಬುದೂ ಒಂದಾಗಿದೆ. ಆದ್ದರಿಂದ ಅವರ ಪ್ರಕಾರ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವಗಳೆಂಬುದಕ್ಕೆ ಜಾಗವೇ ಇಲ್ಲ. ಜೆಂಟಲ್ ಎಂಬ ಫ್ಯಾಸಿಸ್ಟ್ ಸಮರ್ಥಕ ಹೇಳುವಂತೆ;
“My personality is suppressed, but up lifted, strenghthened, enlarged by being merged and restored in that of the family, the state, the spirit…every force is normal force in so far as capable of influencing the will, whatever be the argument applied, the sermon or the cudgel” (Democracy and dictatorships: Jawaharlal Nehru; glimpses of world history : p.825)

ಈ ಹೇಳಿಕೆಯನ್ನು ಎಚ್ಚರಿಕೆಯಿಂದ ಓದಿದರೆ, ಸಮರ್ಪಣೆಯ ಭಾವದಲ್ಲಿ ವ್ಯಕ್ತಿತ್ವವನ್ನು ಬಲಿಗೊಡಲು ಸೂಚಿಸುತ್ತಿರುವ ಹುನ್ನಾರ ತಿಳಿಯುತ್ತದೆ. ಅಂತೆಯೇ ಸಮರ್ಪಣೆಯ ಭಾವದಲ್ಲಿ ಹೆಣ್ಣನ್ನು ಫ್ಯಾಸಿಸ್ಟ್ ಧೋರಣೆಯ ಸಮಾಜಗಳು ಒತ್ತಾಯ ಮಾಡುತ್ತಿರುವುದು ವ್ಯಕ್ತಿತ್ವದ ತ್ಯಾಗಕ್ಕೆ. ಮನುಸ್ಮೃತಿಯಲ್ಲಿ ಒಂದು ಶ್ಲೋಕ ಸ್ತ್ರೀಯನ್ನು ವರ್‍ಣಿಸುವುದು ಹೀಗೆ – “ಎಂತಹ ಗುಣಗಳುಳ್ಳ ಗಂಡನೂಡನೆ ಸ್ತ್ರೀ ವಿವಾಹದಿಂದ ಸೇರುತ್ತಾಳೆಯೋ, ಅಂತಹ ಗುಣಗಳನ್ನೇ ಅವಳೂ ಪಡೆಯುವಳು; ಅವಳು ಸಮುದ್ರದೊಡನೆ ಸೇರಿದ ನದಿಯಂತೆಯೇ (ತನ್ಮಯಳಾಗಿ) ಆಗುತ್ತಾಳೆ”. ಉದಾಹರಣೆಗೆ ವಸಿಷ್ಠನನ್ನು ಮದುವೆಯಾದ ಅಕ್ಷಮಾಲಾ ಕೀಳುಜಾತಿಯ ಹೆಂಗಸು ಅವಳು ಅವನನ್ನು ಅನುಸರಿಸಿ ಅವನ ಗುಣಗಳಿಂದ ಉನ್ನತಳಾದಳು. ಮಂದಪಾಲನನ್ನು ಮದುವೆಯಾದ ಶಾರಂಗಿ ಯಥಾಪ್ರಕಾರ ಕೀಳುಜಾತಿಯ ಹೆಣ್ಣು. ಅವಳಿಗೂ ಅಸ್ತಿತ್ವವೆಂಬುದು ಅವಳ ಗಂಡನಿಂದಲೇ ಬರುತ್ತದೆ. ಇದನ್ನೂ ಅಲ್ಲಿ ಕೆಳಗೆ ಸೇರಿಸುತ್ತಾನೆ ಮನು. ಅಂದರೆ ಗುಣಗಳ ಬಗ್ಗೆ ತನ್ನದೇ ಆದ ವಿವೇಚನೆ ಇರದ ಹೆಂಗಸಿನ ವ್ಯಕ್ತಿತ್ವವು ಸ್ವತಃ ಭಾವನಾತ್ಮಕ, ಕ್ರಿಯಾತ್ಮಕ ಸಂವೇದನೆಗಳನ್ನು ಸೃಷ್ಟಿ ಮಾಡಿಕೊಳ್ಳುವ ಸ್ಥಿತಿಯಲ್ಲಿದೆಯೇ?

ತ್ರಿವೇಣಿಯ ಕೀಲುಗೊಂಬೆಯ ಸೀತಮ್ಮನ ಪಾತ್ರಕ್ಕಿಂತ ಭಿನ್ನವಾಗಿರದ ಎಷ್ಟೋ ಮಹಿಳೆಯರನ್ನು ನೋಡುತ್ತಿದ್ದೇವೆ. ಅವರೆಲ್ಲ ತಮ್ಮ ಭಾವನೆಗಳು ಅಥವಾ ಕ್ರಿಯಾಶೀಲತೆಯ ಬಲದ ಬಗ್ಗೆ ನಿರ್ದಿಷ್ಟ ಅರಿವು ಇಲ್ಲದೇ ಬದುಕುತ್ತಿದ್ದಾರೆ. ಅಕಸ್ಮಾತ್ ಆಗಿ ಅದರ ಅರಿವುಂಟಾದರೂ ಅದನ್ನು ವಿವರಿಸಿಕೊಳ್ಳುವ ಚೈತನ್ಯವು ಇಲ್ಲದಾಗಿರುತ್ತದೆ. ಚಿತ್ರದುರ್ಗ ಆಕಾಶವಾಣಿಯು ಮನೆಮನೆಗೆ ಹೋಗಿ ಹೆಂಗಸರನ್ನು ಮಾತನಾಡಿಸಿ ಅವರ ಕಷ್ಟಸುಖ ಹಂಚಿಕೊಳ್ಳುವ ವಿಶಿಷ್ಟ ಕಾರ್ಯಕ್ರಮ ರೂಪಿಸಿತ್ತು. ಅಲ್ಲಿ ಬಹಳಷ್ಟು ಜನ ಮಹಿಳೆಯರು ಮನಬಿಚ್ಚಿ ಮಾತನಾಡಲೂ ಅಂಜುತ್ತಿದ್ದರೆ, ಗ್ರಾಮೀಣ ಪ್ರದೇಶಗಳಿಗೆ ಸೇರಿದ ಹೆಣ್ಣುಮಕ್ಕಳು ಧೈರ್ಯವಾಗಿ ಮಾತನಾಡುತ್ತಿದ್ದರು. ಆದರೆ ಇಬ್ಬರ ಗುಂಪಿನಲ್ಲೂ ತಮ್ಮ ಸ್ವಂತ ಭಾವನೆಗಳ, ಕೆಲಸಗಳ ಅರಿವು ಇಲ್ಲದಂತೆ ಕಾಣುತ್ತಿತ್ತು. ಒಬ್ಬಳು ಗ್ರಾಮೀಣ ಮುಸ್ಲಿಂ ಮಹಿಳೆ, ನನಗೆ ನೆನಪಿರುವಂತೆ, ಗಂಡ ಹೊಡೆಯುತ್ತಾನೆ ಎಂಬುದನ್ನು ನೇರವಾಗಿ ಹೇಳಿಕೊಂಡಳು. ಕಾರ್ಯಕ್ರಮ ನಿರ್ವಾಹಕರು ಆಗ ಅವಳನ್ನು ಕೇಳಿದರು, “ನೀನು ಏನು ಮಾಡುತ್ತೀಯೆ, ಆಗ?” ಎಂದು. “ಗಂಡ ಹೊಡೀತಾನೆ ಅಂದ್ರ ಏನು ಮಾಡೋದ್ರಿ,
ಬೆನ್ನುಕೊಟ್ಟು ಕುಂಡ್ರತೀನಿ” ಎಂದು ಸಲೀಸಾಗಿ ಹೇಳಿದಳು ಅವಳು! ಅರಿವಿನ ಕಿಂಚಿತ್ತು ಸುಳಿವೂ ಅವಳಲ್ಲಿ ಕಾಣುವಂತಿರಲಿಲ್ಲ.

ಸ್ತ್ರೀಯರ ಸಮಸ್ಯೆಗಳು ಎಷ್ಟೋ ಕಾಲದಿಂದ ಹೈಲೈಟ್ ಆಗುತ್ತಲೇ ಇವೆ. ಅದಕ್ಕೆ ಪರಿಹಾರಗಳೆಂಬಂತೆ ಆರ್ಥಿಕ ಸಬಲತೆ, ವಿದ್ಯಾಭ್ಯಾಸದ ನೆರವು-ಇತ್ಯಾದಿ ಅಂಶಗಳನ್ನು ಸೂಚಿಸಲಾಗುತ್ತಿತ್ತು. ಆದರೆ ಇವುಗಳು ಎಷ್ಟು ಪ್ರಮಾಣದಲ್ಲಿ ದೊರೆತರೂ ಮತ್ತೆ ಮೇಲೆ ಚರ್ಚಿಸಿದ ಧೋರಣೆಗಳ ಸ್ವರೂಪ ಬದಲಾದಂತೆ ಕಾಣುತ್ತಿಲ್ಲ. ಇದು ಯಾಕೆ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿಕೊಳ್ಳಬೇಕಾಗಿದೆ. ‘ವಿದ್ಯಾವಂತರಾದ ಕ್ಷಣ, ಅಥವಾ ಆರ್‍ಥಿಕ ಸಬಲತೆಯನ್ನು ಹೊಂದಿದಾಕ್ಷಣ ಫ್ಯಾಸಿಸ್ಟ್ ಧೋರಣೆಗಳಿಂದ, ಬ್ರೈನ್‍ವಾಶ್
ತಂತ್ರಗಳಿಂದ ಮುಕ್ತರಾಗಿದ್ದೇವೆಂದು ಭಾವಿಸಲು ಸಾಧ್ಯವಿಲ್ಲ. ಯಥಾಪ್ರಕಾರ ಈ ವರ್ಗವನ್ನೂ ಹೊಸ ತಂತ್ರಗಳಿಂದ, ಅದೃಶ್ಯ ಲಗಾಮುಗಳಿಂದ ಸಮಾಜ ನಿಯಂತ್ರಣ ಮಾಡುತ್ತಿರುತ್ತದೆ. ಮತ್ತೆ ಅಲ್ಲಿ ಭಾವನೆಗಳು ಮತ್ತು ಕ್ರಿಯಾತ್ಮಕ ಸ್ವರೂಪಗಳನ್ನು ಎಚ್ಚರಿಕೆಯಿಂದ ಶೋಧಿಸಿಕೊಳ್ಳಬೇಕಾಗುತ್ತದೆ.

ಸ್ಥಿರೀಕರಣಗಳನ್ನು ಒಪ್ಪಿಕೊಳ್ಳುವಂತೆ ಮಾಡುವುದು ಸಾಮಾಜೀಕರಣದ ಭಾಗವಾಗಿಯೇ ಬರುತ್ತದೆ. ಭಾವನಾತ್ಮಕ ಎನ್ನುವ ಅಂಶವನ್ನು ‘ಭಾವುಕ’ ಎಂಬ ಅರ್‍ಥಕ್ಕೆ ಸಮೀಕರಿಸಲಾಗುತ್ತದೆ. ಭಾವನೆ ಎಂದರೆ ಭಾವುಕತೆಯ ಅತಿರೇಕ ಎನ್ನುವುದನ್ನು ಮಹಿಳೆಯ ವ್ಯಕ್ತಿತ್ವಕ್ಕೆ ಅಂಟಿಸುವುದು. ತಾಯಿ ಕರುಳು, ತಾಳಿ, ಕುಂಕುಮ, ಮಗು – ಈ ಎಲ್ಲಾ ಪದಗಳು ಸಾಮಾನ್ಯವಾಗಿ ಸಾಮಾಜಿಕ ಅರ್‍ಥ ಸಂದರ್ಭಗಳಲ್ಲಿ ಭಾವುಕತೆಯ ಅಂಶಗಳಿಂದಲೇ ಅರ್‍ಥವಾಗುವಂಥವು. ವಾಸ್ತವವಾಗಿ ಹೆರಿಗೆಯಂತಹ ನೋವಿನ ವಾಸ್ತವಗಳಿಗೆ ತೆರೆದುಕೊಳ್ಳುವ ಹೆಣ್ಣು ಧಾರಣ ಶಕ್ತಿಯನ್ನು ಹೊಂದಿರುತ್ತಾಳೆ. ಆದರೆ ಆ ಗುಣವನ್ನು ಮರೆಯಾಗಿಸಲಾಗುತ್ತದೆ. ಆ ಅಂಶಗಳು ನಿನ್ನಲಿಲ್ಲ ಎಂದು ಬ್ರೈನ್‍ವಾಶ್
ಮಾಡಿಬಿಡಲಾಗುತ್ತದೆ. ಹೀಗಾಗಿ ಅಪರಾಧೀಭಾವವು ತುಂಬಿಕೊಂಡಂತಹ ಹೆಣ್ಣು ವರ್‍ಗವೊಂದು ಸೃಷ್ಟಿಯಾಗುತ್ತದೆ. ಹಳೆಯ ಕಾಲದ ಮೌಲ್ಯಗಳನ್ನು ಪುನಃ ಪರಿಶೀಲಿಸಿ, ಸ್ವಂತ ಭಾವನೆಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಮನಗಾಣುವುದು ಇಂದಿನ ತುರ್‍ತು ಕೆಲಸವಾಗಿದೆ.

ಈ ಮೊದಲು ಹೇಳಿದ ವಿದ್ಯಾವಂತ ವರ್‍ಗ ಅಥವಾ ಆರ್‍ಥಿಕ ಸಬಲರಾಗಿರುವ ಗುಂಪುಗಳಿಗೆ ಭಾವನಾತ್ಮಕ ಚೈತನ್ಯವನ್ನು ರೂಪಿಸಿಕೊಳ್ಳುವುದು ಇನ್ನೂ ತೊಡಕಿನದು. ಸುತ್ತ ಇರುವ ಸಾಮಾಜಿಕ ಕಟ್ಟುಪಾಡುಗಳು ಒಂದು ಬಗೆಯ ವ್ಯಕ್ತಿತ್ವಕ್ಕೆ ಆಗ್ರಹಿಸುತ್ತಿದ್ದಂತೆ ಕಾಣುತ್ತವೆ. ವಿದ್ಯಾಭ್ಯಾಸ ತರುವ ಚೈತನ್ಯವು ಇನ್ನೊಂದು ವ್ಯಕ್ತಿತ್ವಕ್ಕೆ ಎಳೆಯುತ್ತಿರುತ್ತದೆ. ಈ ಎರಡರ ನಡುವಿನ ಆಯ್ಕೆಯು ಮತ್ತೆ ಸಂದಿಗ್ಧತೆಯನ್ನುಂಟು ಮಾಡುತ್ತದೆ. ಎರಡು ಪಾತ್ರಗಳಲ್ಲಿ ಅಭಿನಯಿಸುವ ಕಷ್ಟ ಇಲ್ಲಿ ಉಂಟಾಗುತ್ತದೆಯಲ್ಲದೆ, ಅಪರಾಧೀಭಾವವು ಮತ್ತಷ್ಟು ಕಾಡುವಂತದ್ದಾಗಿರುತ್ತದೆ.

ಕ್ರಿಯಾತ್ಮಕ ಸಂವೇದನೆಗಳನ್ನು ಕ್ರಿಯಾಶೀಲತೆಯ, ಸೃಜನಶೀಲ ಆಯಾಮಗಳೆಂದು ಗ್ರಹಿಸುವುದಾದರೆ, ಮಹಿಳೆಯ ವ್ಯಕ್ತಿತ್ವದಲ್ಲಿ ಅವು ಹೆಚ್ಚು ಕಾಣುತ್ತವೆ. ಭೌತವಾದಿ ಮೀಮಾಂಸಕರು ಕಾಣುವಂತೆ, ಇತಿಹಾಸದಲ್ಲಿ ಹೆಣ್ಣಿನ ವ್ಯಕ್ತಿತ್ವ ಕುಗ್ಗುವುದಕ್ಕೆ ಜೈವಿಕ ಕಾರಣಗಳೇ ಕಾರಣವಾಗಿತ್ತು. ಹೋಮೋ ಎರೆಕ್ಟಸ್ ಆದ ಮನುಷ್ಯ ನೈಸರ್ಗಿಕ ವಿಧಾನಕ್ಕಿಂತ ಸ್ವಲ್ಪ ಭಿನ್ನರೀತಿಯ ಆಕಾರ ಪಡೆದು ನೇರವಾಗಿ ನಿಂತಿದ್ದರಿಂದ, ಗರ್ಭವು ಅವಧಿವೂರ್ವ ಪ್ರಸವಕ್ಕೆ ಸಜ್ಜಾಯಿತು. ಅನಂತರ ಗರ್ಭದ ಅವಧಿಯಲ್ಲಿ ನೈಸರ್ಗಿಕ ಶಕ್ತಿಯನ್ನು ಪಡೆದು ಹೊರಬೀಳುತ್ತಿದ್ದ ಮಗುವು ಮೊದಲೇ ಹೊರಬರುವಂತಾಗಿದ್ದರಿಂದ ಅದಕ್ಕೆ ಆರೈಕೆ ಬೇಕಾಯಿತು. ಈ ಎಲ್ಲಾ ಜೈವಿಕ ಕಾರಣಗಳಿಂದ ಮಹಿಳೆಯ ವ್ಯಕ್ತಿತ್ವದ ಮೇಲಿನ ಒತ್ತಡಗಳು ಹೆಚ್ಚಿದವು. ಸಾಮಾಜಿಕವಾಗಿಯೂ ಹಿಂದೆ ಸರಿಯಬೇಕಾಯಿತು. ಆದರೆ ಕೃಷಿಯ ಅನ್ವೇಷಣೆಯನ್ನು ಮಾಡಿದ ಕ್ರಿಯಾಶೀಲತೆಯು ಹೆಣ್ಣಿನದೇ. ಅಂದರೆ ಕ್ರಿಯಾಶೀಲತೆಯು ಒತ್ತಡಗಳನ್ನು ಮಹಿಳೆಯು ತನ್ನ ವ್ಯಕ್ತಿತ್ವದಲ್ಲಿ ಪೋಷಿಸಿಕೊಂಡು ಬಂದಿದ್ದಾಳೆ. ಮಿಥ್‍ಗಳಿಂದ ಪ್ರೇರಿತವಾದ ಸಮಾಜಗಳು ಅವಳನ್ನು ಅಬಲೆಯೆಂದು ಗಣಿಸುತ್ತಲೇ ಬಂದಿವೆ. ಆದಿವಾಸಿ ಮಹಿಳೆಯರಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಲ್ಲಿ ಈ ಕ್ರಿಯಾಶೀಲ ಚೇತನವು ಒಂದಿಲ್ಲೊಂದು ರೀತಿಯಲ್ಲಿ ಜೀವಂತವಾಗಿದೆ ಎನ್ನಬಹುದು.

ನಾಗರಿಕತೆಯ ವಿಕಾಸದ ಹಂತಗಳಲ್ಲಿಂದ ಈಚೆಗೆ ಮತ್ತೆ ಕ್ರಿಯಾಶೀಲತೆಯ ಸಮಸ್ಯೆ ಬೇರೆ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬಂಡವಾಳಶಾಹಿ ಸಮಾಜಗಳು ಕ್ರಿಯಾಶೀಲತೆಯನ್ನು ಉತ್ಪಾದಕ ಗುಂಪಿಗೆ ಸೇರಿಸುತ್ತದೆ. ಸ್ತ್ರೀ ಶಕ್ತಿಯಾಗುತ್ತಾಳೆ. ಅದು ಬಂಡವಾಳಶಾಹಿ ಸಮಾಜದಲ್ಲಿ ಪೂರಕ ಚೇತನವಾಗಿ ಕೆಲಸ ಮಾಡುತ್ತಾ ಹೋಗುತ್ತದೆ. ಅತಿಯಾದ ಕ್ರಿಯಾಶೀಲ ಶಕ್ತಿಯಾಗಿ ಮಾರ್ಪಡಿಸುವ ತಂತ್ರವೂ ಬ್ರೈನ್‍ವಾಶ್ ತಂತ್ರವೇ ಆಗಿದೆ. ಕಾರ್ಪೋರೇಟ್ ವಲಯಕ್ಕೆ ಹೆಣ್ಣು ಸಂಚಲನೆ ನೀಡುವ ವಸ್ತುವಾಗಿರುವ ಸಂದರ್ಭಗಳೇ ಹೆಚ್ಚಾಗುತ್ತಿವೆ. ಅರ್ಥಶಾಸ್ತ್ರೀಯವಾಗಿ ವ್ಯಕ್ತಿತ್ವವನ್ನು ವಿಸ್ತರಿಸಿಕೊಳ್ಳುವುದು ಕ್ರಿಯಾಶೀಲತೆಯ ಉತ್ಪಾದನೆಯ ಮಾರ್ಗವಾಗಿ ಕಾಣುತ್ತದೆ. ‘ಎಕ್‍ಸ್ಟ್ರಾ ವಿಂಗ್ಸ್’ ಎಂದು ಹೆಣ್ಣಿನ ಇಂದಿನ ವ್ಯಕ್ತಿತ್ವವನ್ನು ವರ್ಣಿಸುವುದುಂಟು. ಅಥವಾ ಕಂಪ್ಯೂಟರ್ ಭಾಷೆಯಲ್ಲಿ ಹೇಳುವುದಾದರೆ ಜಿ.ಬಿ. ಜಾಸ್ತಿಯಾದಂತೆಲ್ಲ, ಯಾಂತ್ರಿಕ ಶಕ್ತಿ ಹೆಚ್ಚಾಗಿ ಉತ್ಪಾದಕತೆಯು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಹಾಗೆ ಆದಿಶಕ್ತಿಯಾದ ಹೆಣ್ಣಿನ ವ್ಯಕ್ತಿತ್ವವೂ ಒಂದು ಆರೋಪಿತ ವ್ಯಕ್ತಿತ್ವ. ಕ್ರಿಯಾಶೀಲತೆಯ ಹೆಸರಲ್ಲಿ ಅತಿಯಾದ ದುಡಿಸಿಕೊಳ್ಳುವ ಪರಿಣಾಮಗಳು ಮತ್ತಷ್ಟು, ಅಪರಾಧೀ ಭಾವವನ್ನು ಹುಟ್ಟುಹಾಕುತ್ತಿವೆ. ಯಾರನ್ನೋ ಮೆಚ್ಚಿಸುವ, ಅಪ್‍ಡೇಟ್ ಆಗುವ ಆತಂಕಗಳಲ್ಲಿ ಕ್ರಿಯಾಶೀಲತೆಯ ನಿಜವಾದ ಸ್ವರೂಪ ಕಾಣಲು ಸಾಧ್ಯವೇ ಎಂದು ಯೋಚಿಸಬೇಕಾಗಿದೆ.

(ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್ತಿನಾಶ್ರಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿಚಾರಗಳು.)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶ್ರೀ ಜಯನ ಬೆಳಕು
Next post ಶ್ರಮಜೀವಿಗಳ ಹಾಡು

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys