ಬೆಚ್ಚಿಸುವುದೇಕವನ
ಬಿಮ್ಮನೆ ಕುಳಿತವನ
ಸುಮ್ಮನೆ ಬಾಗಿಲ ತೆರೆದು

ಕಿಂಡಿ ಸಾಲದೆ ನೋಡುವೊಡೆ
ಗಿಂಡಿ ಸಾಲದೆ ಸಿಂಪಿಸುವೊಡೆ

ಕಿರಣ ಸಾಲದೆ ಬೀರುವೊಡೆ
ಕಿಟಕಿ ಸಾಲದೆ ಹಾಯುವೊಡೆ

ಕಂಬನಿ ಸಾಲದೆ ಹರಿಯುವೊಡೆ
ಕಿರುನಗೆ ಸಾಲದೆ ಸುರಿಯುವೊಡೆ

ಎಬ್ಬಿಸುವುದೇಕವನ
ತನಗೆ ತಾನಾಗಿರುವವನ
ಸುಮ್ಮನೆ ಬಾಗಿಲ ತೆರೆದು

ಕಾಡುವುದೇಕವನ
ಯೋಚಿಸುತ್ತಿರುವವನ
ಸುಮ್ಮನೆ ಬಾಗಿಲ ತೆರೆದು

ಪೀಡಿಸುವುದೇಕವನ
ಕುಲಕೋಟಿಯ ವಿಧಿ ಬರೆವವನ
ಸುಮ್ಮನೆ ಬಾಗಿಲ ತೆರೆದು

ಅಚ್ಚರಿಗೊಳಿಸುವುದೇಕವನ
ಏಕಾಂತದಲ್ಲಿರುವವನ
ಸುಮ್ಮನೆ ಬಾಗಿಲ ತೆರೆದು

ಭಂಗಿಸುವುದೇಕವನ
ಧ್ಯಾನದಲಿರುವನ
ಸುಮ್ಮನೆ ಬಾಗಿಲ ತೆರೆದು

ಬೇಡುವುದಕೇನೂ ಇಲ್ಲ
ಕೊಡುವುದಕೂ ಕೈಯಲಿ ಇಲ್ಲ

ಕೊಟ್ಟವನ ನಮ್ಮನೀ ತರ ಇಟ್ಟವನ
ಗೊತ್ತಿರದವನಿಗೆ ಯಾವುದು ಇಲ್ಲದವನ

ಇಂತಿರಲವನ
ಬೆಚ್ಚಿಸುವುದೇಕವನ
ಸುಮ್ಮನೆ ಬಾಗಿಲ ತೆರೆದು
ಹಲವು ನಾಮಗಳಲಿ ಕರೆದು
*****