ಅಪರಿಮಿತ ತಾರೆಗಳ ಅನುದಿನವು ಆಗಸದಿ
ಎಣಿಸುವುದು ನನ್ನ ಧರ್ಮ

ಎಣಿಸುವೆನು ಗುಣಿಸುವೆನು
ಅಳೆಯುವೆನು ಎಳೆಯುವೆನು
ಯಾಕೆ ಏನೆಂದು ನಾನು ತಿಳಿಯೆ

ನಿಂತಿವೆಯೊ ಚಲಿಸುತಿವೆಯೊ
ಮಿಂಚುತಿವೆಯೊ ಜ್ವಲಿಸುತಿವೆಯೊ
ವರ್ಧಿಸುತಿವೆಯೊ ಕ್ಷಯಿಸುತಿವೆಯೊ
ಹಾಗೆ ಅಲ್ಲಿ ಅವು ಹೇಗಿವೆಯೊ ಎಂದು
ನಾನು ತಿಳಿಯೆ

ಸೂರ್ಯೋದಯವಿದೆಯೊ
ಚಂದ್ರೋದಯವಿದೆಯೊ
ಹಗಲಿರುಳಿದೆಯೊ ದೇವರ ದಯವಿದೆಯೊ
ಆ ಲೋಕವೆ ಅದು ಹೇಗಿದೆಯೊ ಎಂದು
ನಾನು ತಿಳಿಯೆ

ಕಾಲವಿದೆಯೊ ಸಮಯವಿದೆಯೊ
ಋತುಚಕ್ರ ಇನ್ನೆಷ್ಟು ಉರುಳುವುದಿದೆಯೊ
ಹೋದದ್ದು ಮರಳಿ ಬರುವುದೊ ಬಾರದೊ
ಬಂದರೂ ಅದು ಎಂತಿರುವುದೊ ಎಂದು
ನಾನು ತಿಳಿಯೆ

ಆದಿಯೊಳಗಾರು ಅಂತ್ಯದೊಳಗಾರು
ಆದಿ ಅಂತ್ಯಗಳ ಕಂಡವರು ಯಾರು
ಮಧ್ಯಂತರ ಪ್ರವೇಶಿಸಿ ಈ ನನ್ನನಿಲ್ಲಿ
ತಂದಿರಿಸಿ ಹೋದವರು ಯಾರು ಎಂದು
ನಾನು ತಿಳಿಯೆ

ಇದು ಮಿಥ್ಯೆಯಾದರೆ ಸತ್ಯವಿನ್ನೇನು
ಇದು ಸತ್ಯವಾದರೆ ಮಿಥ್ಯೆಯಿನ್ನೇನು
ಮಿಥ್ಯೆ ಸತ್ಯಗಳ ಮೀರಿ ಬಂತೇನು
ಮಹಾ ಮಾಯೆಯೆಂಬೊಂದು ಮಹಿಮೆಯೆಂದು
ನಾನು ತಿಳಿಯೆ
*****