ಬಡವರುದ್ಧಾರದ ಮಾತುಗಳನ್ನುದುರಿಸಿ,
ದಿನದಿನಕ್ಕೆ ಬೆಳೆದಂತಹ ಕುಬೇರರೆ,
ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ
ನಿಮಗಾಗಿ ಮುಗಿಲೆತ್ತರದ
ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ,
ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ
ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ,
ಬಡವರಿಗೆ ದೇಶಾಭಿಮಾನದ ಮಂತ್ರ ಹೇಳಿ
ಗ್ಯಾಟ್, ಡಂಕೆಲ್ ಒಪ್ಪಂದಗಳಿಗೆ ಸಹಿ ಹಾಕಿದವರೇ,
ಸಾಮ್ರಾಜ್ಯಶಾಹಿಗಳಿಗೆ
ದೇಶವನ್ನೇ ಅಡವಿಟ್ಟ ಭೂಪರೆ ?
ದೇಶದ ಸ್ವಾಯತ್ತತೆ, ಸ್ವಾವಲಂಬನೆಯ
ಮಾತುಗಳನ್ನುದುರಿಸುತ್ತಾ
ಉದಾರೀಕರಣ – ನೆಪದಲ್ಲಿ
ದೇಶವನ್ನು ಅತಂತ್ರದ
ಸಂಕೋಲೆಯಲಿ ಸಿಕ್ಕಿಸಿದವರೆ
ಜನತೆಯ ಕಷ್ಟಗಳನ್ನು
ಸಂದರ್ಶನದ ಮೈಕ್, ಟಿ.ವಿ.
ಕ್ಯಾಮರಾಗಳಿಗೆ ಸೀಮಿತಗೊಳಿಸಿದವರೆ,
ಹಿಟ್ಲರನ ಇತಿಹಾಸ ರಚಿಸದಿರಿ
ಬ್ರೇವೆರಿಜ್‌ಳ ಭ್ರೂಣಕ್ಕೆ ಬೆಳೆಸದಿರಿ
ಜನತೆಯ ಮನಗಳ ಮುರಿಯದಿರಿ
ಮಹಾತ್ಮರ ಕೊಲ್ಲುವ ಗೋಡ್ಸೆಯಾಗದಿರಿ
ಬನ್ನಿ ನಿಮ್ಮ ಜನರ ಹತ್ತಿರ ಬನ್ನಿ.
*****