ಹೌದು,
ಇದು ಮಕ್ಕಳ ವರ್ಷ
ಮಕ್ಕಳಿಗಾಗಿಯೇ
ಹಲವಾರು ಕಾರ್ಯಕ್ರಮ
ಹಾಕಿಕೊಂಡಿದ್ದೇವೆ.
ಆಗಾಗ ಭಾಷಾ ಸ್ಪರ್ಧೆ
ಆಟದ ಸ್ಪರ್ಧೆ ಏರ್ಪಡಿಸುತ್ತೇವೆ
ಮಕ್ಕಳ ವರ್ಷದಾಗೇ
ನಮ್ಮದೂ ಛಾನ್ಸ್ ಅಲ್ವಾ?
ಅದಕ್ಕೆಂತಲೆ ಬಿಸ್ಕತ್
ಚಾಕಲೇಟ, ಹಾಲು, ಪೌಡರಗಳ
ಬೆಲೆ ಗಗನಕ್ಕೇರಿಸಿದ್ದೇವೆ
ಅದಕ್ಕಾಗಿಯೇ ಅವು ಈಗ
ಮುಗಿಲ ಚುಕ್ಕಿಯಂತೆ
ಮೇಲೆ ಬೆಳಗುತ್ತಿವೆ.
ಏನು?
ನಿನ್ನ ಮಗೂಗೇ
ಮೆತ್ತನ್ನ ಅನ್ನ ಕೂಡ ಸಿಗಲ್ವೆ?
ಅದಕ್ಕೆ ನಾವೇನು ಮಾಡಬೇಕು?
ಎಲ್ಲಾ ಅವರವರ ಕರ್ಮ –
ಆದರೆ….
ನಮ್ಮದು ಸಮಾಜವಾದೀ ರಾಷ್ಟ್ರ
ಅಂತ ಖಾದಿಗಳು ಹೇಳುತ್ತಿವೇ
ಕೇಳಿಲ್ಲವೇ ನೀನು.
*****