ಕಡೆಯ ಗಂಟೆಯು ಹೊಡೆವ ಮುನ್ನವೆ
ಶಿವನ ಗಂಟೆಯು ಮೊಳಗಲಿ
ಅಂತರಂಗದಿ ದೀಪ ಬೆಳಗಲಿ
ಜೀವ ಸುಂದರವಾಗಲಿ

ಒಳಗು ಮಧುರಾ ಹೊರಗು ಮಧುರಾ
ಬದುಕು ಸುಮಧುರವಾಗಲಿ
ಮಾತು ಪರಿಮಳ ತುಂಬಿ ತುಳುಕಲಿ
ಮನವು ಮಲ್ಲಿಗೆಯಾಗಲಿ

ದಿವ್ಯ ಸಂಸ್ಕಾರಕ್ಕೆ ಆತ್ಮದ
ಜ್ಞಾನ ರೆಕ್ಕೆಯು ಬೀಸಲಿ
ನಾವು ದೀಪದ ಗೋಪುರಾಗಲಿ
ಶಕ್ತಿ ಕಿರಣವು ಚಿಮ್ಮಲಿ

ಮಾತು ಶೀತಲ ಮೌನ ಶೀತಲ
ಜ್ಞಾನ ರತುನವು ಸುರಿಯಲಿ
ನಿನ್ನ ನೋಟದ ಪ್ರೇಮ ಪರಿಮಳ
ಸಕಲ ಲೋಕವ ನಗಿಸಲಿ
*****