ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ
ಹೊಸಗಂಡ ರಸಗಂಡ ಕೈಯತಾರ ||ಪಲ್ಲ||

ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ
ನನಗೆಣಿಯ ನೀ ಠೀಕು ಠುಮುಠುಮುಕಿ
ತಾತಾರ ಬಾಬಾರ ಸರದಾರ ಸಾವ್ಕಾರ
ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧||

ಕುಂತುಂಡ್ರ ಪಡಿರೊಟ್ಟಿ ತಿಂತಾನ ಆ ಗಂಡ
ಮನಿತುಂಬ ಮಣಹೂಂಸು ತುಂಬತಾನ
ಬಾ ಅಂದ್ರ ಬ್ಯಾಡಂತ ಗೊರಕೀಯ ಹೊಡಿತಾನ
ಬೆಳಗಾದ್ರ ಊರ್‍ಹೊರಗೆ ಓಡತಾನ ||೨||

ನನಗ್ಯಾಕ ತಿಳಿವಲ್ತು ಯಾಕಂತ ಹೊಳಿವಲ್ತು
ನಿನಕಂಡ್ರ ಎದಿಯಾಗ ಝುಂಗುಟ್ಟಿತ
ತೊಡಿಯಾಗ ಕಟ್ಟಿರಿವಿ ಕಡಿದಾಂಗ ನಡುಕಾತ
ಖುಶಿಯಾಗ ರಾತ್ರ್‍ಯಾಗ ಘುಂಘುಟ್ಟತ ||೩||

ಮಾಡ್ಕೊಂಡ ಮನಗಂಡ ಜಾಲೀಯ ಬೊಡ್ಯಾದ
ನೀನಾದಿ ಕ್ಯಾದೀಗಿ ಗಂಡುಹಕ್ಕಿ
ಸಂಪೀಗಿ ತಂಪಾದಿ ಸೋಬಾನ ದಿಂಪಾದಿ
ತುಟಿಯಾಗ ತುಟಿಯಿಟ್ಟು ಪಿಂಡಮುಕ್ಕಿ ||೪||

ಆ ಗಂಡ ನನ್ಹಿಡಿದು ಮಕಮಾರಿ ಕಚ್ಚಾಗ
ನಿನನೆನಪು ನನಗಾಗಿ ನಾ ಅತ್ತೆನೆ
ದೇಹಕ್ಕ ಆ ಗಂಡ ಯೋಗಕ್ಕ ನೀ ಗಂಡ
ನಿನಮಾರಿ ನೆನಪಾಗಿ ಭೋ ಅತ್ತೆನೆ ||೫||
*****