[ಮಕ್ಕಳ ಹಾಡು]

ಅಜ್ಜಯ್ಯ ಗುಜ್ಜಯ್ಯ ಮಜ್ಜೀಗಿ ಕೊಡತೇನ
ದಟ್ಟಿಯ ಪುಟ್ಟಿಯ ಕರೆದೊಯ್ಯ
ದೊಡ್ಡಜ್ಜ ದೊಡ್ಡಯ್ಯ ತಂಬಾಕು ಕೊಡತೇನ
ಪರಕಾರ್‍ದ ಮಮ್ಮಗಳ ಕರೆದೊಯ್ಯ ||೧||

ಬೂರಲ ಮರದಾಗ ಜೋರಾಗಿ ಕರದೇನ
ಬುರ್‍ಲಜ್ಜ ಬುರ್ರಂತ ಹಾರ್‍ಹೋದೆ
ಗುಡದಾಗ ಕೊಳ್ಳಾಗ ಕಣಿವ್ಯಾಗ ಹುಡಿಕೇನ
ಬುರ್‍ಲಜ್ಜ ಸುರ್ರಂತ ಜಾರ್‍ಹೋದೆ ||೨||

ಗುಂಡ್ಗುಂಡ ಗುಳಬಟ್ಲ ತೂಗು ಬೆಳ್ಳಿಯ ತೊಟ್ಲ
ಗಾಳ್ಯಾಗ ನಿನಹಡಗ ಏನ್‌ಚಂದ
ಅಚ್ಚೀಯ ಪುಚ್ಚಣ್ಣಿ ಗುಚ್ಚೀಯ ಗುಳ್ಳಣ್ಣಿ
ಮುಗಲಾಗ ನಿನಹಡಗ ಬಾಳ್‍ಚಂದ ||೩||

ವಜ್ಜೀನಾ ಇಲ್ಲಜ್ಜ ಕಜ್ಜೂರಿ ಅಂಜೂರಿ
ನನ್ನಽಟ ನಿನಕೂಟ ಎತ್ತೊಯ್ಯ
ನನಗಲ್ಲ ನಿನಬೆಲ್ಲ ನನಜೊಲ್ಲ ಕೆನಿಮೆಲ್ಲ
ಧೋತರ ಪದರಾಗ ಇಟ್ಟೊಯ್ಯ ||೪||

ನನಬಿಟ್ರ ನಿನಗಿಲ್ಲ ಗುಡುಗೂಡಿ ಗುಸಿಗೂಸಿ
ಬೆಲ್ಲದ ಚಾದಾಗ ಹಾಲಿಲ್ಲ
ನಿನಸಗತಿ ನಿಂತಾಗ ಜೋಲಿತಾ ನಿಲದಾಗ
ನಾ ನಿನ್ನ ಕೈಬೆತ್ತ ಮರತೆಲ್ಲ ||೫||
*****
ಬುರ್‍ಲಜ್ಜ=ಬೂರಲ ಮರದ ಅಜ್ಜ: ಗುಜ್ಜಯ್ಯ =ನಡ ಬಾಗಿದ ಅಜ್ಜ; ಆಚ್ಚಿ=ರೊಟ್ಟಿ: ಗುಚ್ಛಿ=ಗುಚ್ಛ.