ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ
ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ….

ನಮ್ಮುಸಿರ ಬಿಸಿಯು ಆರುವ ಮುನ್ನ
ನಮ್ಮೆದೆಯ ಅಸುವು ನೀಗುವ ಮುನ್ನ
ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ
ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ…
ಅಟ್ಟೋಣ ದ್ರೋಹಿಗಳ, ಮೆಟ್ಟೋಣ ಬನ್ನಿ
ಕಟ್ಟಳೆಯ ಬದಿಗಿಟ್ಟು ಉರಿವ ಬೆಂಕಿಯ ತನ್ನಿ

ನಮ್ಮಳಲು ನಮಗಿರಲಿ
ಕೆಂಪಿರುಳು ಬೇಡ
ಸ್ವಾತಂತ್ರ್ಯ ಉಳಿದಿರಲಿ
ದಾಸ್ಯದಳು ಬೇಡ….

ನಮ್ಮೂರು ಕನಸಿನ ನಾಕ
ನಮ್ಮವರು ಉಸಿರಿತ್ತು
ಸಾವನ್ನೆ ಮುತ್ತಿಟ್ಟು
ನಮಗಿತ್ತ ಸುರಲೋಕ….

ನಮ್ಮೊಡಲ ಒಡೆಯರು ನಾವು
ಒಮ್ಮನದಿ ವೈರಿಗಳ ಹೊಡೆದು
ಜೀವ-ಭಾವೈಕ್ಯದ ಸಿಡಿಲ-ಮಳೆಗರೆದು
ದೇಶಕಂಟಕರ ಕೆಡಿಸುವೆವು….. ಇಲ್ಲವೆ ಸಾವು!

ಕಾಳರಾತ್ರಿಯ ಭಯವ ತಡೆದು
ಹಾಳು ಪ್ರಭುತನದ ಬೇಡಿ ಒಡೆದು
ಹೊಸತೇಜ-ಓಜಗಳ ಮೆರಗಿಂದ
ರಸಭರಿತ ಬೀಡಕಟ್ಟಿಹೆವು ನಾವು….

ನಮ್ಮ ನೆಲ ಚಂದನದ ಕಂಪಿನದು
ನಮ್ಮ ಹೊಲ ಹಸುರುಮಯ ಸೊಂಪಿನದು
ಶಾಂತಿದೂತರ, ಕ್ರಾಂತಿವೀರರ
ನಮ್ಮಕುಲ ಇಳೆಯಲತಿ ಪೆಂಪಿನದು…

ರಣಕಹಳೆ ನಾಡಿಗಳ ಹೊಕ್ಕು ನೆತ್ತರಿನ
ಕಣಕಣದಿ ಹೊಸ ಬಿರುಸನಿತ್ತು
ಕೆಣಕುತಿದೆ ನಮ್ಮ ನೆಲದಭಿಮಾನವನಿಂದು
ಹೋಗೋಣ ಬನ್ನಿ, ಮಾತೆಯ ಮಾನ ಉಳಿಸೋಣ

ಭಾರತಾಂಬೆಯ ವೀರ ಪುತ್ರರು
ಮೇರುಗಿರಿಯ ಹಿಮಖಂಡದಲಿ
ನೆತ್ತರಿನ ಕುಯಿಲು ಹರಿಸುತಿರೆ
ಭೀತರಾಗದೆ ನಾವು ನೆಗೆಯೋಣ, ಬಗೆಯೋಣ….

ಹೊನ್ನು ಮಣ್ಣಿನ ಕಲಹ ಬೇಡ ನಮಗಿಂದು
ಕುನ್ನಿಗಳ ಕೆಂಗಣ್ಣ ಕಿಡಿಯಿಹುದು ಮುಂದು
ನನ್ನಿಯಲಿ ನಮ್ಮೊಲವು
ಚಿನ್ನಿಗಳ ಕಣ್ಣುಗಳೆ ನಮಗೆ ಕುಂದು

ಇಂದು ಬನ್ನಿ ಒಂದಾಗೋಣ
ಮುಂದೆ ಎದೆಸೆಟೆದು ಸಾಗೋಣ
ಕಡೆಯುಸಿರು ಇರುವನಕ
ನೆಲದ ಬೆಲೆ ಉಳಿಸೋಣ…

(ಅಡಿಗರನ್ನು ನೆನೆದು)
*****