ಮತ ಕೊಡುವಾಗ
ನನ್ನ ಮತ ಬೇಡವೆಂದಿತ್ತ
ಮುಂಗಾರು ಒಳನುಗ್ಗಿ
ಸಿಡಿದೆದ್ದು ಮುರಿದಿದ್ದ
ಮನಮಂದಿರದ ಬಾಗಿಲನು ಜಗ್ಗಿ
ಕಿಟಕಿಯ ಬಿಸಿಲುಗನ್ನಡಿಯೊಳಗಿನ
ತಂಪನು ಘಾಸಿಗೊಳಿಸಿ
ಅಂತರಂಗದಲಿ ದಶಮಾನಗಳಿಂದಲು
ಒಳಿತು ಕೆಡುಕುಗಳ ಅರಿವು
ಬಂದಂದಿನಿಂದಲು
ಸೃಷ್ಟಿಯಾದ,
ಉದ್ದಗಲಕೆ ಬೆಳೆದ ಒಂದು ಸುಂದರ
ಮನೋಹರ ಪ್ರತಿಮೆ
ಕೆಡವಿ ನೆಲಸಮವಾದುದರ
ಅನುಭವ ನಿತ್ಯ ಸತ್ಯವಾಗಿ;
ಭ್ರಷ್ಟ ವೃಷ್ಟಿಯು ಇಂದು
ಏಕೋ ಅತಿಯಾಗಿ
ನರನ ಹರ್ಷದ ರೇಖೆ
ಒಂದು ಕತೆಯಾಗಿ
ನಾಲ್ದೆಸೆಗೂ ಹಬ್ಬಿ
ಭೂ-ವ್ಯೋಮಗಳ ನಡುವಿನ
ಅಳೆಯಲಾರದ ಅಂತರವನು
ಕಾರ್ಮೋಡಗಳಿಂದ ಅಳೆದು
ಮೇಘಗರ್ಜನೆಯಿಂದ
ನನ್ನೆದೆಯನು ತತ್ತರಿಸಿ ಒಡೆದು;
ನರನಿಂದು ಹುಂಬ
ಮನುಷ್ಯನೂ ಸಿಂಹನೂ ಆಗಿರದೆ
ತನ್ನ ಗರಜಿಗೆ ತಾನಗೆಟ್ಟು
ಕುಣಿಯುವ ಡೊಂಬ
ಎಂಬ ಧ್ಯಾನವನ್ನು ಮೂಡಿಸಿತ್ತು.
*****


















