ನನ್ನ ಕಾಲೇಜಿನೆದುರು
ಯಮಾಲಯದಂತೆ ನಿಂತಿರುವ
ರೋಗಗ್ರಸ್ತ, ಜರ್ಜರ
ಮಹಾಮಹಡಿಯ ಪ್ರಾಚೀನ
ಮಂದಿರದಲ್ಲಿ
ದೇವರಿಲ್ಲ
ಅವನ ಬದಲಿಗೆ
ಅಧಿಕೃತ ಏಜಂಟ್‌ಗಳಾಗಿ
ಮುದಿ, ತರುಣ ವೈದ್ಯರು
ಗೌರ, ಮೃದು ಭಾವದ ನರ್ಸುಗಳು
ಸೇವೆಯ ಪಣ ಹೊತ್ತು
ಯಾವದೋ ಜನ್ಮದ
ಋಣತೆರುವ ಖಯಾಲಿನಲ್ಲಿ
ದಿನ ರಾತ್ರಿ ಸಾವಿನೊಡನೆ
ಸೆಣಸುವ
ದುಷ್ಕರ್ಮಿಗಳ ನರಳಾಟವನ್ನು
ಅಳಿಸುವ
ಅರೆ ಮನಸ್ಸಿನ ನಿರ್ಧಾರದಿಂದ
ಓಡಾಡುವುದು ಕಾಣುವುದು,
ಯಾವ ಶಾಪವೊ
ಮನುಷ್ಯ ಇಲ್ಲಿ ಬಂದು
ತನ್ನವರಿಂದ ದೂರವಾಗುವ
ನೋವನ್ನು ಉಣ್ಣುತ್ತ
ಬದುಕುವ ಭರವಸೆಯನ್ನು
ಕಾಣದೆ, ಭಯಾತುರನಾಗಿ
ಕಣ್ಣ ಕುಳಿಯಲ್ಲಿರುವ ನಿರಾಶೆಯ ಆಳದಲ್ಲಿ
ಮುಳುಗುತ್ತಿರುವಾಗ
ನಾನು,
ನವುರಾಗಿ ಬಟ್ಟೆಧರಿಸಿದ
ವಿದೇಶೀ ಗಂಧ ಸೂಸುವ
ಯುವ ವೈದ್ಯರು
ಸುರಸುಂದರಿಯೊಂದಿಗೆ
ಅಲ್ಲಲ್ಲಿ ನಿಂತು
ಸರಸವಾಡುವುದನ್ನು ನೋಡುತ್ತೇನೆ.
ಆಗ,
ಈ ಲೋಕವೊಂದು ರುಗ್ದಾಲಯ
ಇಲ್ಲಿ ಬರುವ ಪ್ರತಿಯೊಬ್ಬನೂ
ರೋಗಿ,
ಈ ಮೈಮನಸ್ಸಿನ ರೋಗಕ್ಕೆ
ಪರಿಹಾರ ಎಲ್ಲಿ?
ಎಂಬ ಗುಮಾನಿ ಬಂದು
ಖಿನ್ನ-ಛಿನ್ನನಾಗಿ
ಅಲ್ಲಿಂದ ಹೊರಬೀಳುತ್ತೇನೆ.
*****