ನನ್ನ ಕವಿತೆಗಳ ಕದ್ದು ಓದುವುದು
ಅದರ ವಿಷಯವನೆತ್ತಿ ತೂಗುವುದು
ನನ್ನವಳ ಚಟ…
‘ಓದಿದೆನು ನಿನ್ನ ಗೀತೆಗಳ ನಲ್ಲ’
ಎಂದು ಮೋಹಕವಾಗಿ
ಹಿಂಡುವಳು ನನ್ನ ಗಲ್ಲ
ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ
ಭಾವರಸದೊಳಗೆ ಮಿಂದು
ಬೆರೆಸಿ ನಿನ್ನನು, ಮೈ ಮರೆಸಿ
ನನ್ನ ದೂರಿದ ರೂಪಸಿ
ಯಾರೆಂದು ನನಗೆ ಗೊತ್ತು
ನೀನು ಬರೆವುದೆ ಅವಳ ಸುತ್ತು ಮುತ್ತು
ನನ್ನ ಕಣ್ಣಲಿ ನೋಟ
ಮೈಯ ಬಳುಕು, ಮಾಟ
ನಿನಗೆ ಕಾಣುವುದೆ ಇಲ್ಲ
ನನ್ನ ಒನಪು ಒಯ್ಯಾರ
ನಿನ್ನ ಮೆಚ್ಚನು ಬಯಸಿ
ಮಾಡಿದ ಸಿಂಗಾರ
ನಿನ್ನ ಕವಿತೆಗೆ ಸ್ಫೂರ್ತಿಯಾಗುವುದಿಲ್ಲ.
ನಿನಗವಳು ರಾಗಿಣಿ
ಮಧು ಮಾಲಿನಿ ಚಕೋರಿ
ಮೀಂಟಿದರೆ ಸಾಕು ಹೊರಡುತ್ತೆ ಆಲಾಪ
ಸ್ವರಸಂಗಮದ ಮೌನದಲಿ
ಬಿಚ್ಚಿಕೊಳ್ಳುತ್ತೆ ಅನಂತ ಸಲ್ಲಾಪ…
ನಾನು ಹೇಳುತ್ತೇನೆ: ಕರುಬದಿರು ನಲ್ಲೆ
ಕವಿತೆಯಲಿ ಬರುವವಳು ನೀನು
ಅವಳಲಿ ನಿನ್ನನಿಟ್ಟು ನಿನ್ನನು ಅವಳಲಿಟ್ಟು
ನೋಡುವೆನು, ಬರೆಯುವೆನು
ನನ್ನ ಒಲವುಗಳ ಬಗೆಯನರಿಯದೆ
ಕನಸಿನವಳಾರೆಂದು ತಿಳಿಯುವುದು ಹೇಗೆ
ಅದಕೆಂದು ನೀನೆ ನನ್ನ ಕವಿತೆಯ
ಕಲ್ಪನೆಯಾಗು, ಉಸಿರಾಗು
ಹಣತೆಯಲಿ ಉರಿವ ದೀಪದ ಹಾಗೆ!
*****


















