ಆಡಮ್ ಅಗೆದಾಗ ಈವ್ ನೇಯ್ದಾಗ
ಇದ್ದರೆ ಇವರು ?
ಮೊಹೆಂಜೊದಾರೋದ ಶವಗಳಿಗೆಲ್ಲಾ
ಜೀವ ಏಕ್ ದಮ್ ಬಂದ ಹಾಗೆ
ಕುರುಕ್ಷೇತ್ರದಲ್ಲಿ ಹೂತವರೆಲ್ಲಾ ರಜಾದ ಮೇಲೆ ತಿರುಗುವ ಹಾಗೆ
ಎಂದೋ ಹುಟ್ಟಬೇಕಿದ್ದವರು ಫಕ್ಕನೆ ನೆನಪಾಗಿ
ಲೇಟಾಗಿ ಅವತರಿಸಿದ ಹಾಗೆ
ಪರ್ಗೆಟೋರಿಯೋದಿಂದ ತಪ್ಪಿಸಿಕೊಂಡು
ವೈತರಣೀ ನದಿಯಲ್ಲಿ ಮುಳುಗದೆ ಬಂದು
ಹಳೆ ವಿಳಾಸಗಳ ಹುಡುಕುವವರಂತೆ
ಹಣಕೀ ಹಣಕೀ ನೋಡುವರು
ನಿದ್ದೆಹೋದ ರೋಡುಗಳಲ್ಲಿ ವಾಲುತ್ತಾ ನಡೆಯುವರು
ಗಂಟೆಗಟ್ಟಳೆ ಮಾತಾಡುವರು
ಮಾತಾಡುತ್ತಾ ಇಳಿಯುವರು-ಊಟಕ್ಕೆ ಅಥವಾ ಜಗಳಕ್ಕೆ
ಹುಲಿ ಹಾಲನ್ನು ಕುಡಿದವರು ಕತ್ತೆ ಹಾಲಲ್ಲಿ ಮಿಂದವರು
ಸರಸ್ವತಿಯ ಸ್ತನದ್ವಯ ಪಂಡಿತರು
ಕತ್ತಿ ಹಿಡಿದಲ್ಲಿ ಕಲಿಗಳು
ಸಂಸ್ಕೃತಿ ಸುಧೆಯ ಎಮ್ಮೆಗಳು ಈ ಹೆಮ್ಮೆಯ ಜನರು
ಗಕ್ಕನೆ ನಿಲ್ಲುವರು ಸುಮ್ಮನೆ ಹೋಗುವರು
ಮಾನವ ದುರಂತದ ಒಂದಂಕ ಆಡುವರು
ಬಲವಂತದ ಹೇರಿನ ಕೆಳಗೆ
ಬದುಕುವರು-ಬದುಕುತ್ತೇವೆಂದು ಭ್ರಮಿಸುವರು
ಈ ಅನಾಥ ಜನರು
*****