ಅಚ್ಚೋದ ಸರೋವರದ ಅಚ್ಚಗನ್ನಡಿಯಲ್ಲಿ ತಿದ್ದಿ ತೀಡಿದ
ಹೊಚ್ಚ ಹೊಸ ರೂಪಾಗಿ ಬರುತ್ತೀಯೆ.
ಗಂದಬಂಧವಾಗಿ ಬಂದವಳು ಕಿಟಕಿ ಬಾಗಿಲುಗಳ ಬಂದುಮಾಡಿ
ಕಪಾಟಿನ ಕೀಲಿ ಕಳಚಿ ಅಸ್ತವ್ಯಸ್ತವನ್ನೆಲ್ಲ ಓರಣಮಾಡುತ್ತೀಯೆ.
ಎದೆಮೇಲೆ ಹೂಹೆಜ್ಜೆಯಿಟ್ಟು ಗೆಜ್ಜೆಗುಂಗಿನಲ್ಲಿ ಮುಳುಗಿಸುತ್ತ
ಕಣ್ಣದಾಳ ಚಿಮ್ಮಿ ಆಳಕ್ಕೆ ಗೆಲ್ಲುತ್ತ
ಸರ್ಪಸುತ್ತಿನಲಿ ನನ್ನ ಅಂಗುಲಂಗುಲ ನುಂಗುತ್ತ
ನಾನು, ನನ್ನ ಅಸ್ತಿತ್ವ ಇಲ್ಲವಾಗಿ- ಅಲ್ಲ ಎಲ್ಲ ನೀನಾಗಿ
ನನಗಾಗಿ ನಾನು ತಡಕಾಡುವಾಗ ಬಿಗಿಬಂಧ ಸಡಿಲಾಗಿ
ಬಿರುಗಾಳಿ ಬೀಸಿ ಬೆಚ್ಚಿ ನೋಡಿದಾಗ
ನಾನು ಮತ್ತು ನನ್ನ ರೂಮು; ತೆರೆದ ಕಿಟಕಿ ಬಾಗಿಲು.
*****