ನಿನ್ನೊಂದಿಗೆ ಮಾತನಾಡಲಾರೆ…
ಮುತ್ತು, ಸರ, ನತ್ತು, ವಾಲೆ,
ಝುಮುಕಿಯೊಡನೆ ಮಾತಾಡುವೆ

ಸೌದೆ, ಇದ್ದಿಲು, ಬೆಂಕಿ,
ನೀರು, ಕೊಡ, ರಾಟೆಯೊಡನೆ ಮಾತಾಡುವೆ

ಬೇಯಿಸಿದ ಹಿಟ್ಟು-ರೊಟ್ಟಿ
ದೋಸೆ-ಪಲ್ಯದ ಜೊತೆ ಮಾತಾಡುವೆ

ನಿನ್ನೊಂದಿಗೆ ಮಾತನಾಡಲಾರೆ

ಜಾಜಿ ಮಲ್ಲಿಗೆ, ಸಂಪಿಗೆ,
ಸೀಬೆ, ಮಾವು, ನೇರಳೆಯ ಜೊತೆ ಮಾತಾಡುವೆ

ನಾಯಿ, ಬೆಕ್ಕು, ಎಮ್ಮೆ, ಎತ್ತು,
ಬಾಗಿಲು, ಕಿಟಕಿ, ಹುಲ್ಲು ಮಾಡಿನ
ಜೊತೆ ಮಾತಾಡುವೆ

ಪೈರು, ತೆನೆ, ಕವಣೆ, ಕೋಲು,
ಬೆದರು ಬೊಂಬೆಯೊಡನೆ ಮಾತಾಡುವೆ

ನಿನ್ನೊಂದಿಗೆ ಮಾತನಾಡಲಾರೆ

ಬೆವರು, ಹಸಿವು,
ಬಯಕೆ, ಬೇನೆಯೊಂದಿಗೆ ಮಾತಾಡುವೆ

ದೀಪ, ಧೂಪ, ಹೂವು, ಗಂಧ,
ಕಲ್ಲು ದೇವರೊಂದಿಗೆ ಮಾತಾಡುವೆ

ನನಗೆ ನಾನೇ, ನನಗೆ ನಾನೇ ಮಾತಾಡುವೆ
ನಿನ್ನೊಂದಿಗೆ… ಉಹುಂ ಮಾತನಾಡಲಾರೆ.
*****