ರುಕ್ಸಾನಾ ರುಕ್ಸಾನಾ
ನನ್ನಂತರಂಗದ ಸುಲ್ತಾನಾ

ಬಾಗಿಲಿಗೆ ಬಾರೆ ರುಕ್ಸಾನಾ
ಮೆರವಣಿಗೆ ಹೊರಟಿದೆ ರುಕ್ಸಾನಾ
ಮೆರವಣಿಗೆ ಹೊರಟಿದೆ
ಬೀದಿಗೆ ಬಂದಿದೆ
ಬೆಳ್ಳಿಯ ತೇರಿದೆ

ಅಂಗಳದ ತುಂಬ ರುಕ್ಸಾನಾ
ಆಲಿಕಲ್ಲುಗಳುಂಟು ರುಕ್ಸಾನಾ
ಆಲಿ ಕಲ್ಲುಗಳುಂಟು
ಆಲದ ನೆರಳುಂಟು
ಅದರೊಳು ಒಗಟುಂಟು

ಸಂತೆಗೆ ಹೋಗೋಣ ರುಕ್ಸಾನಾ
ಸಂಜೆಗೆ ಮೊದಲೆ ರುಕ್ಸಾನಾ
ಸಂಜೆಗೆ ಮೊದಲೆ
ಸಂತೆಗೆ ತೆರಳೆ
ಅಂಜುಮಲ್ಲಿಗೆ ಅರಳೆ

ಕಡಲ ದಂಡೆಯಲಿ ರುಕ್ಸಾನಾ
ಕೈ ಹಿಡಿದು ನಡೆದರೆ ರುಕ್ಸಾನಾ
ಕೈ ಹಿಡಿದು ನಡೆದರೆ
ತೆರೆಗಳು ಬಡಿದರೆ
ಬರುವೆಯ ಏನಾರೆ

ತಿಂಗಳ ಬೆಳಕಿನಲಿ ರುಕ್ಸಾನಾ
ಕಂಗಳಲಿ ನೀರಿತ್ತು ರುಕ್ಸಾನಾ
ಪ್ರಶ್ನೆಗುತ್ತರವಿತ್ತು
ಮುತ್ತಾಗಿ ನಿಂತಿತ್ತು
*****