ಏನ್ಚಂದ ಏನ್ಚಂದ ನಮ್ಮೂರ ಕಾಲೇಜು
ಹನುಮಂತ ದೇವ್ರಾಂಗ ಮುದ್ದು ಯವ್ವಾ
ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ
ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧||
ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ
ಕುಂತಾರ ಹುಡುಗೋರು ಗೇಟಿನ್ಯಾಗ
ಥೇಟ್ ಥೇಟ ಕಾಮಣ್ರು ಒಳಗೆಲ್ಲಾ ಜೋಗಣ್ರು
ತಲಿಯಂದ್ರ ಸಿಗರೇಟು ಪ್ಯಾಕುಯವ್ವ ||೨||
ಕ್ಲಾಸೀಗೆ ಚಕ್ಕರು ಕ್ಲಬ್ಬೀಗೆ ಹಾಜರು
ನನಕಂಡು ಕ್ಯಾಕೀಯ ಹಾಕ್ಯಾರವ್ವಾ
ಏ ಹುಡಿಗಿ ಅಂತಾರ ನನವಯು ನಲವಯ್ಸು
ಹರೆಯದ ಹುಡಿಗೇರ್‍ಗೆ ಹ್ಯಾಂಗೇಯವ್ವಾ ||೩||
ಕಲಸೋರು ಮಾಜಾಣ್ರು ಮಿಂಚಕ್ಕಿ ಕಾಜಾಣ್ರು
ಸಂಜೀಕ ಇಸಪೇಟು ಆಡ್ಯಾರವ್ವಾ
ಹಿಂಗಾದ್ರ ಹೆಂಗವ್ವ ನನಮಕ್ಳ ಗತಿಯವ್ವ
ನನಗೂನು ಡಾರ್‍ಲಿಂಗು ಅಂತಾರವ್ವಾ ||೪||
ನಮ್ಮೋಣಿ ಕಲ್ಲವ್ವ ಕಾಲೇಜು ಕಲಿತಾಳ
ಮಂಗ್ಯಾನ ಚಡ್ಡೀಯ ಹಾಕ್ಯಾಳವ್ವ
ಸೋಗ್ಲಾಡಿ ಸುಬ್ಬವ್ವ ತಲಿಯಾಗ ಸೆಗಣೆವ್ವ
ಓದಂದ್ರ ಕುಂಡೀಯ ತಿರುವ್ಯಾಳವ್ವ ||೫||
*****