ಪಾಪದ ಮುದುಕ

ಸರಕಾರಿ ಆಸ್ಪತ್ರೆಯ ಪುರುಷ ವಿಭಾಗದ ಕೊನೆಯ ಬೆಡ್ಡಿನ ಮೇಲೆ ಆ ಮುದುಕ ಮಲಗಿದ್ದ.  ಸುಮಾರು ತೊಂಬತ್ತರ ವಯಸ್ಸು.  ತುಂಬಾ ಸೋತವನಂತೆ ಕಾಣಿಸುತ್ತಿದ್ದ.  ಬೆನ್ನು ನೋವಿನಿಂದ ಬಳಲುತ್ತಿದ್ದ ಅವನು ಸ್ವಾತಂತ್ರ್‍ಯಯೋಧನೆಂದು ಊರಿಗೇ ತಿಳಿದಿತ್ತು.  ಅನೇಕ ಚಳುವಳಿಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವನು.  ಹದಿಹರೆಯದ ವಯಸ್ಸಿನಲ್ಲಿ ಗಾಂಧೀಜಿಯವರ ಕರೆಗೆ ಓಗೊಟ್ಟು ಮನೆ ತೊರೆದು ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದ.  ಗಾಂಧೀಜಿಯವರಂತೆ ಅವನು ಯಾವುದಕ್ಕೂ ಆಸೆಪಟ್ಟವನಲ್ಲ.  ತನಗೆ ಅಧಿಕಾರಕ್ಕಿಂತಲೂ ದೇಶದ ಸೇವೆ ಮುಖ್ಯ;  ತನಗದೇ ಮೆಚ್ಚು ಎನ್ನುತ್ತಿದ್ದ.

ದೇಶಕ್ಕೆ ಸ್ವಾತಂತ್ರ್‍ಯ ಸಿಕ್ಕಾಗ ಅವನು “ನನ್ನ ಭಾರತವು ಮಹಾನ್‌ವಾಗಲಿ, ಸಮೃದ್ಧವಾಗಲಿ, ಸ್ವರ್ಗವಾಗಲಿ, ಚಿರಂತನವಾಗಿರಲಿ” ಎಂದು ಆಶಿಸಿದ್ದ.  ಜನರು ಅವನನ್ನು ಗೌರವಿಸುತ್ತಿದ್ದರು.  ಗಾಂಧೀಜಿಯವರು ಗುಂಡಿಗೆ ಬಲಿಯಾದಾಗ ಅವನನ್ನು ಅನಾಥಪ್ರಜ್ಞೆ ಮುತ್ತಿಕೊಂಡಿತ್ತು.

ಅವರ ರಾಮರಾಜ್ಯದ ಕನಸಿಗಾಗಿ ಹಂಬಲಿಸುತ್ತಿದ್ದ ಮುದುಕನನ್ನು ಸ್ವಾತಂತ್ರ್‍ಯದೀಚೆಗಿನ ವಿದ್ಯಮಾನಗಳು ದಿಕ್ಕೆಡಿಸಿದ್ದು.  ಪ್ರತಿ ಸಮಯದಲ್ಲೂ ಮಹಾತ್ಮರನ್ನು ಧ್ಯಾನಿಸುತ್ತ, ಕೊಳಚೆಯ ಹುಳವಾಗುತ್ತ ರಾಷ್ಟ್ರವನ್ನು ಮುಕ್ಕತೊಡಗಿದ್ದ ಭ್ರಷ್ಟ ರಜಕಾರಣಿಗಳ ಬಗ್ಗೆ ಅವನ ಲಾವಾ ಕುದಿಯುತ್ತಿತ್ತು.  ಭೋಗಭಾಗ್ಯ ಅನುಭವಿಸುತ್ತಿರುವ ರಾಜಕೀಯಶಾಹಿ, ಅಧಿಕಾರಶಾಹಿ, ಬಂಡವಾಳಶಾಹಿಗಳೂ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತವೆ ಎಂಬ ಆತಂಕ ಅವನನ್ನು ಕಾಡತೊಡಗಿತ್ತು.  ಅದಕ್ಕಾಗಿ ಅವನು ಸಭೆ, ಸಮಾರಂಭಗಳಲ್ಲಿ ಈ ಬಗ್ಗೆ ನಿಷ್ಠುರನಾಗಿಯೆ ಮಾತನಾಡುತ್ತಿದ್ದ.  ಅವನು ಹೇಳುವುದು ಕನ್ನಡಿಯಂತೆ ಸತ್ಯವೇ ಆಗಿದ್ದರೂ ಅಧಿಕಾರದ ತೆವಲಿನವರಿಗೆ ಅಪತ್ಯವಾಗಿತ್ತು.  ಕೊನೆಗೆ ಅವರು ಅವನನ್ನು ಸಮಾರಂಭಮಗಳಿಂದ ದೂರವಿಟ್ಟರು.

ಮುದುಕನಿಗೆ ಹತ್ತಿರದ ಸಂಬಂಧಿಗಳು ಯಾರೂ ಇರಲಿಲ್ಲ.  ತಂದೆ-ತಾಯಿಗಳು ಎಂದೋ ತೀರಿಕೊಂಡಿದ್ದರು.  ಹೊಲ, ಮನೆಗಳನ್ನು ದೇಶದ ಹಿತಕ್ಕಾಗಿ ಕಳೆದುಕೊಂಡಿದ್ದ ಮುದುಕ ಸ್ವಾತಂತ್ರ್‍ಯಯೋಧರ ಪಿಂಚಣಿಯನ್ನು ಕೂಡ ನಿರಾಕರಿಸಿದ್ದ.  ಪಕ್ಷದ ಕಛೇರಿಯಲ್ಲೇ ವಾಸ್ತವ್ಯ ಹೂಡಿದ್ದ ಅವನಿಗೆ ಹಮ್ಮಿಣಿ ಅರ್ಪಿಸಲು, ಚಿಕ್ಕದೊಂದು ಮನೆ ಕಟ್ಟಿಕೊಡಲು ಕೆಲವು ಪುಢಾರಿಗಳು ಹವಣಿಸಿದ್ದರು.  ಆದರೆ ಮುದುಕ ಅವರ ಧಾವಂತದಲ್ಲಿರುವ ಸ್ವಾರ್ಥವನ್ನು ಗುರುತಿಸಿದ್ದ ಮತ್ತು ಅವರ ವಿಚಾರವನ್ನು ತಿರಸ್ಕರಿಸಿದ್ದ.  ಅವನ ಹೆಸರಿನಲ್ಲಿ ಉಳಿದಷ್ಟು ಹಣ, ಮತ್ತು ಹೆಸರು ಮಾಡಿಕೊಳ್ಳುವ ನೀಚರಿಗೆ ಅಪಮಾನವೆನಿಸಿತ್ತು.  “ಇವನು ಎಂದೂ ಉದ್ಧಾರವಾಗುವುದಿಲ್ಲ” ಎಂದು ಗೊಣಗಾಡಿ ಅವನನ್ನು ಉಪೇಕ್ಷಿಸಿದ್ದೂ ಅಲ್ಲದೆ, ಕಛೇರಿಯಿಂದ ಹೊರಗೆ ಹಾಕಿಸುವಲ್ಲಿಯೂ ಯಶಸ್ವಿಯಾಗಿದ್ದರು.

ಅಂದಿನಿಂದ ಅವನು ಒಂದು ಕಡೆಗೆ ನಿಂತಿರಲಿಲ್ಲ.  ಹೆಚ್ಚಾಗಿ ಅವನು ಗಾಂಧೀಜಿಯವರ ತತ್ವಗಳನ್ನು ಪ್ರಚಾರ ಮಾಡುತ್ತ ತಿರುಗುತ್ತಿದ್ದ.  ಬಡವರ ನೋವಿಗೆ, ಶೋಷಿತರ ಕಾವಿಗೆ ತಹತಹಿಸುತ್ತ ಅವರ ಸಹಾಯಕ್ಕಾಗಿ ಧಾವಿಸುತ್ತಿದ್ದ.  ಅನ್ಯಾಯ ಕಂಡುಬಂದಲ್ಲಿ ಹತ್ತಾರು ಜನರನ್ನು ಸೇರಿಸಿಕೊಂಡು ಪ್ರತಿಭಟನೆಗೆ ಇಳಿಯುತ್ತಿದ್ದ.  ಅಶ್ರಯ ಮನೆಗಳಿಗರುವ ಉದ್ಯಾನದ ಬಳಿ ಯಾರೋ ಅವನಿಗೊಂದು ಪುಟ್ಟ ಗುಡಿಸಲು ಹಾಕಿಕೊಟ್ಟಿದ್ದರು.  ಜನಗಳ ಸಮಸ್ಯೆಗಾಗಿ ಸರಕಾರಿ ಕಛೇರಿಗೆ ಅಲೆದಾಡುತ್ತಿದ್ದ.  “ನಾನು ಸ್ವಾತಂತ್ರ್‍ಯಯೋಧ, ಇದು ನನ್ನ ದೇಶ.  ಇವರು ನನ್ನ ಜನ.  ನೀವೂ ನಮ್ಮವರೆ.  ಇವರನ್ನು ಗೋಳಾಡಿಸಬೇಡಿರಪ್ಪ.  ಅವರ ಕೆಲಸ ಮಾಡಿಕೊಡಿರಿ” ಎಂದು ಭಗೀರಥನಂತೆ ನಿಂತುಬಿಡುತ್ತಿದ್ದ.  ಹಟ ಮಾಡುತ್ತಿದ್ದ.  ಧಿಮಾಕು, ಉಡಾಫೆ ಮಾಡುವ ಅಧಿಕಾರಿಗಳ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದ.

ಬೇರೆಯವರಿಗಾಗಿಯೇ ತನ್ನ ಬದುಕು ಎಂಬಂತಿದ್ದ ಮುದುಕನನ್ನು ಬೆನ್ನುನೋವು ನೆಲಕ್ಕೆ ಒಗೆದುಬಿಟ್ಟಿತ್ತು.  ಈಗ ಜನರು ಅವನಿಂದ ದೂರ ಸರಿಯತೊಡಗಿದ್ದರು.  ತೀರ ಮುದ್ದೆಯಾಗಿದ್ದ ಮುದುಕನನ್ನು ಯಾರೋ ತಂದು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದರು.

ಆಸ್ಪತ್ರೆಯ ನರಕದಿಂದ ತಪ್ಪಿಸಿಕೊಳ್ಳಲು ಮುದುಕನಿಗೆ ಸಾಧ್ಯವಾಗಲಿಲ್ಲ.  ಅವನು ಸ್ವಾತಂತ್ರ್‍ಯಯೋಧನಾದರೇನು?  ಅವನು ಅನಾಥ, ನಿಷ್ಪ್ರಯೋಜಕ, ಅವನಿಂದ ಏನೂ ಸಿಕ್ಕುವುದಿಲ್ಲವೆಂದು ತಿಳಿದ ಕೂಡಲೇ ಯಾವ ವೈದ್ಯರೂ ಅತ್ತ ಸುಳಿದಿರಲಿಲ್ಲ.  ಬಿಳಿಯ ಬಟ್ಟೆಯೊಳಗೆ ಸೈತಾನನ್ನು ಮುಚ್ಚಿಟ್ಟುಕೊಂಡವರಿಗೆ ಮುದುಕನ ನರಳಾಟ ಕೇಳಿಸಲೇ ಇಲ್ಲ.  ಅಕ್ಕ-ಪಕ್ಕದವರೆ ಒಂದಿಷ್ಟು ಕನಿಕರ ತೋರಿಸುತ್ತಿದ್ದರು.  ತಿನ್ನಲು ಏನಾದರೂ ಕೊಡುತ್ತಿದ್ದರು.  ಬೆನ್ನುನೋವು ಮಾತ್ರ ಅಸಾಧ್ಯವೆನಿಸಿ ಮುದುಕ ನಿದ್ದೆಯಿಲ್ಲದೆ ನರಳುತ್ತಿದ್ದ.  ಯಮಧೂತರಂತೆ ಕಾಣಿಸುವ ನರ್ಸ್, ಬ್ರದರ್‌ಗಳು ಮುದುಕನ ಹಾಸಿಗೆಯ ಮೇಲೆ ದಿನಾಲೂ ನಾಲ್ಕಾರು ಬಿಳಿ ಗುಳಿಗೆ ಒಗೆದು ಹೋಗುತ್ತಿದ್ದರು.  “ನೋವು ಎಂದರೆ ಅದು ಬರುವುದೇ” ಎಂದು ಕೀಚಕ ನಗೆ ನಕ್ಕು ಮುಂದೆ ಹೋಗುವರು.

ಈ ಲೋಕಕ್ಕೆ ಸಂಬಂಧವಿಲ್ಲದವನಂತಿದ್ದ ಮುದುಕ ಕೊನೆಗೂ ನೋವಿನಿಂದ ಮುಕ್ತಿಪಡೆದಿದ್ದ.  ಉಸಿರು ನಿಲ್ಲಿಸಿಕೊಂಡಿದ್ದ ಅವನ ಸುತ್ತಲೂ ಜನ ಗಬೋ ಎಂದು ಸೇರಿದ್ದರು.  “ಸ್ವಾತಂತ್ರ್‍ಯೋಧ ಅಮರ ರಹೆ” ಎಂದು ಕೂಗಿದ್ದರು.  ಆಸ್ಪತ್ರೆಯ ಸಿಬ್ಬಂದಿ ಈಗವನ ಬಳಿ ಹೆಮ್ಮೆಯಿಂದ ನಿಂತರು.  ಗಣ್ಯಾತೀಗಣ್ಯರು, ಪತ್ರಕರ್ತರು, ಇತರೆ ಸುದ್ದಿಮಾಧ್ಯಮದವರು ಧಾವಿಸಿ ಬಂದರು.  ಮಂತ್ರಿಗಳೂ ಬಂದರು.  ಆಸ್ಪತ್ರೆಯ ಆವರಣದೊಳಗೆ ಮುದುಕನ ದೇಶಪ್ರೇಮ, ನಿಸ್ಪೃಹತೆ ಕುರಿತು ಭಾಷಣ ಕೊರೆದರು.  ಮುದುಕನ ಆತ್ಮ ಒಂದುಕಡೆ ಕುಳಿತು ಊಸರವಳ್ಳಿಗಳ ಮಾತು ಆಲಿಸುತ್ತ ವಿಷಾದದ ನಿಟ್ಟುಸಿರು ಚೆಲ್ಲತೊಡಗಿತ್ತು.

ಸಾರ್ವಜನಿಕವಾಗಿ ಕೂಡಿಸಿದ ಹಣದಲ್ಲಿ ಮುದುಕನ ಶವಯಾತ್ರೆ ನಡೆಯಿತು.

ಮುದುಕ ಮಣ್ಣಲಿ ಮಲಗಿದ.

ಸ್ಮಶಾನದಿಂದ ಹಿಂತಿರುವುಗುವಾ ಮುದುಕನದೇ ಮಾತು.

“ನಮ್ಮ ದೇಶದ ದಂಡಪಿಂಡಗಳಾದ ಹಾಜಿಮಾಜಿ ಮಂತ್ರಿಮಹೋದಯರಿಗೆ ಗಂಟಲು, ಬೆನ್ನು, ಕಾಲು, ಹೃದಯ ಬೇನೆಗಳಾದರೆ ಕೋಟಿಗಟ್ಟಲೆ ಖರ್ಚು ಮಾಡಿ ವಿದೇಶಗಳಲ್ಲಿ ಚಿಕಿತ್ಸೆ ಕೊಡಿಸುತ್ತಾರೆ.  ಪಾಪ, ಈ ಮುದುಕನಿಗೆ ಇಲ್ಲಿಯೇ ಆದರೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ” ಎಂದೊಬ್ಬ ಮರುಕದ ದನಿಯಲ್ಲಿ.  ಅವನ ಪಕ್ಕದ ಮನುಷ್ಯ ತಟ್ಟನೆ ಪ್ರತಿಕ್ರಿಯಿಸಿದ “ಮುದುಕ ಬಡವ, ಸ್ವಾತಂತ್ರ್‍ಯಯೋಧ;  ರಾಜಕಾರಣಿಯಲ್ಲವಲ್ಲ!”

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಂಬಾಗಾರುತಿಯನ್ನು ರಂಬೇರು ಬೆಳಗಿರೆ
Next post ಮಂಗಲಂ ಮಹದೇವಿಗಾರುತಿ ಎತ್ತಿರೇ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…