ಎಲ್ಲಿರುವೆ ? ಎತ್ತ ಹೋದೆಯೋ ಕಂದಾ !
ಒಂದು ಸಾರಿ ದನಿಗೂಡಿಸಯ್ಯ
ಕಾಡಿಸ ಬಾರದೋ ತಮಾಷೆಗಾದರೂ ತಾಯ ಹೃದಯ.

ನೋಡಿದ್ದೆ ಒಂದು ಕ್ಷಣದ ಹಿಂದೆ
ಇಲ್ಲಿಯೇ ಇದ್ದೆ
ಓಣಿಯ ಹುಡುಗರ ಸಂಗಡ
ಚಿನ್ನಾಟವಾಡುತ್ತಾ
ಕಣ್ಮನ ತುಂಬಿದ್ದೆ.

ಎಳೆವೆಯ ಸೆಳೆವಿನಲಿ
ಇಲ್ಲಿಯೇ.. ಎಲ್ಲೋ ಹೋಗಿರುವೆ
ಮರಳಿ ಬರುವೆಯೆಂಬ ನಿರೀಕ್ಷೆ ಸುಳ್ಳಾಗಿ
ತಿರುಗಿ ತಿರುಗಿ ಬಿದ್ದು ಹೋಗುತಿವೆ ಕಾಲು
ಹುಡುಕಿ ಹುಡುಕಿ ಬೆಳ್ಳಗಾಗುತಿವೆ ಕಣ್ಣು
ಸೋತು ಆತಂಕದಲಿ ತಿದಿಯಾಗುತಿದೆ ಎದೆ
ಗಾಳಿಗೆ ಸಿಲುಕಿದ ಸೊಡರಾಗುತಿದೆ ಮನ
ಜೀವಕ್ಕೆ ಏನೂ ಬೇಡದಾಗಿದೆ.

ಯಾರಲ್ಲಿ ಒರಲಲಯ್ಯಾ !
ಇಲ್ಲಿ ಯಾರ್‍ಯಾರದು ಅವರವರಿಗೆ ದೊಡ್ಡದು ಕಣಯ್ಯಾ !
ಹೆಚ್ಚಿನವರು ಮರುಕದ ನುಡಿಯೊಂದನೆಸೆದಾರು !
ಕಳೆದುಕೊಂಡಿದ್ದ ತುಂಬಿಸಿಕೊಡರಯ್ಯಾ ಯಾರೂ ?
ಬಾರಯ್ಯಾ ಮಗುವೇ.. ಬಂದು ನಿಲ್ಲೆನ್ನ ಎದುರು
ಒಂದು ಬಾರಿ ಬದುಕಿಸಯ್ಯ ನನ್ನ,

ತಾಯಿ ನಾಯಿಗೆ ಒರೆಯುವರಾರಯ್ಯಾ…
ಬಿಸಿಲಲಿ ಬವಳಿ ಗಾಡಿಯಡಿಯಲಿ ಮರೆತು ಮಲಗಿದ
ಮುದ್ದು ಮರಿಯನು ಎಬ್ಬಿಸಿ ಓಡಿಸದೆ
ಗತ್ತಿನಲಿ ಛಕ್ಕನೆ ಚಲಿಸಿ

ಪಟ್ಟನೆ ತಲೆಯನು ಸಿಡಿಸಿ
ಸಾಯಿಸಿ ಶಪಿಸಿ
ಕಸವ ಮಾಡಿ ಗುಡಿಸಿ, ಬೀಸಿ ಎಸೆದು ನಡೆದ
ಬರ್ಬರ ಸಂಗತಿಯ.

ಆರದು ! ಆರದು !!
ಹಗಲು ರಾತ್ರಿ,
ಮರಳಿ ಬಾರದ ಕಂದನಿಗಾಗಿ
ಓಣಿ ಓಣಿಯನು ಓಲುಗುಡಿಸುವ
ಹುಯಿಲಿಡುವ, ಕರೆಯುವ
ವಾತ್ಸಲ್ಯದೆದೆಯ ನೋವು.
*****