ಪಂಪನ ಶಾಂತಿ ತೋಟದಲಿಂದು
ಬರೀ ಕೊಲೆ ಸುಲಿಗೆ
ಧರ್ಮ ಇಟ್ಟಿಗೆ ಗುಡಿಯೆಂದು
ಸಾಗಿದೆ ಹಿಂಸೆ ಎಲ್ಲಿಗೆ

ಛಲದಭಿಮಾನದಲಿ ಬಲೀ ಕುಲವು
ಭೂತ ಗಣದ ನರ್ತನ
ಕಮರಿ ತ್ಯಾಗ ವೈರಾಗ್ಯವೆಲ್ಲವು
ಸಗಿದೆ ಹಿಂಸಾ ಕೀರ್ತನ

ಕವಿಕಲಿ ಸವ್ಯಸಾಚಿಯಿಂದ
ನಾವು ಕಲಿತದ್ದೇನು
ಮನ ಮತಯುದ್ಧದಿಂದ
ನಾವು ಗಳಿಸಿದ್ದೇನು

ಯುದ್ಧ ಭೂಮಿಯ ಪಡೆ
ಕರ್ಣರ ನಿಂತು ಕೊಲಿಸಿ
ಗಡಿ ಗುಜರಾತುಗಳೆಲ್ಲೆಡೆ
ಮತಾಯುಧ ಪಡೆ ನಿಲ್ಲಿಸಿ

ಪಂಪನ ಶಾಂತಿ ತೋಟದಲ್ಲಿ
ಮತವೆಂದರೆ ಧರ್ಮ
ಗೋಳ ಮುಕ್ಕಾಲು ಅಶಾಂತಿಯಲ್ಲಿ
ತಿಳಿಯದು ಓಟಿನ ಮರ್ಮ

ಶಾಂತಿಯ ತೋಟ ತುಂಬೆಲ್ಲ
ಆಯುಧ ಫಲ ಪೈರು
ಚಿಗುರು ಬೆಳದಿಂಗಳೊಳಗೆ
ಖಡ್ಗ ಕಾರುಬಾರು

(ಒತ್ತಾಸೆ – ಅನ್ನಪೂರ್ಣ ವೆಂಕಟನಂಜಪ್ಪ, ತುಮಕೂರು)
*****