ಜಾಣ್ಮೆಯಿಂದ ಜೀಕುತ್ತಿದೆ ನಾಗರೀಕತೆ
ಕಲ್ಯಾಣದ ಪರಿಕಲ್ಪನೆ
ಶಾಂತಿ ಸೌಹಾರ್ದತೆ, ಕಾಯಿದೆ ಕಾನೂನು
ಮಡಿಲಲ್ಲಿ ತುಂಬಿಕೊಳ್ಳುವಂತೆ
ದುರ್ಯೋಧನರೇ ರಾಜ್ಯವಾಳುತ್ತಿದ್ದಾರೆ.


ಬಗೆ ಬಗೆಯ ಬಗೆಹರಿಯದ ದ್ವಂದ್ವ.
ಅಲ್ಲೊಬ್ಬ ಲಲನೆ ಲಂಟಾನಾ
ಮುಸಿ ಮುಸಿ ನಗುತ್ತಾ
ಮೆಕ್ಸಿಕನ್ ಮರಳುಗಾಡಿನ ಮರಳುಗಾತಿ
ಆಕೆ ಹೆಜ್ಜೆಇಟ್ಟಲ್ಲಿ ಹುಟ್ಟದಂತೆ
ಗಾಂವಟಿ ಬೆಳೆ ಮೊಳಕೆ
ಪ್ರವಾದಿಯ ದಂಡಯಾತ್ರೆಯಂತೆ


ಮತ್ತೀಗ ತರಿ ಮಣ್ಣಿಗೂ ರಸಗೊಬ್ಬರದ ಬಯಕೆ
ದೇಹವೆಂಬುದಷ್ಟೇ ದೇಶಿ, ಉಳಿದಂತೆ ವಿದೇಶಿ.
ಬಿಕ್ಕಿ ಬಿಕ್ಕಿ ಅಳುವ ಮಾತೃಹೃದಯ ಕಸಿವಿಸಿ
ಹಾರಲು ಕಲಿತ ಹಕ್ಕಿಗೆ ಗೂಡು ಕಿರಿಕಿರಿ
ಪ್ರತಿಭೆ ಪಲಾಯನ


ಅಲ್ಲಲ್ಲಿ ಮೊನಚು ಮುಳ್ಳುಗಳು ಸಿದ್ಧವಾಗಿವೆ
ತರಬೇತಿ ಸಖತ್ತಾಗಿ- ತಿಂಗಳಿಗೊಬ್ಬ
ಯಾಕೂಬ್‌ರು ತಯಾರು


ಕೀರ್ತಿ ಪತಾಕೆ, ಸ್ಮಾರಕಗಳು ತಲೆ ಎತ್ತಿವೆ
ಬುಡದಲ್ಲಿ ಕ್ಲೀಷೆಯುತ ಕೊಳೆ
ಸುಡು ಬಿಸಿಲು ಬೇಟೆ ಹುಡುಕುತ್ತಿದೆ.
*****

ನಾಗರೇಖಾ ಗಾಂವಕರ