ಊಟವಾಗಿ ಕುಳಿತಿದ್ದೆ ಹೊರಜಗಲಿಯಲ್ಲಿ ಇಳಿಮಧ್ಯಾಹ್ನ
ಪಡುಗಡಲ ಬೀಸುಗಾಳಿಗೆ ಬೇಕೊ ಬೇಡವೊ ಎಂದು
ಬರುವಂಥ ತೂಕಡಿಕೆ. ಆಗ ಕಂಡುದು ಅಂಗಳದಲ್ಲಿ

ವಲಸೆಯೆದ್ದಂತಿದ್ದ ಇರುವೆಗಳ ಸಾಲೊಂದು
ಒಂದು ನೆಲೆಯಿಂದ ಇನ್ನೊಂದು ನೆಲೆಗೆ
ಧಾವಿಸುತಿದ್ದುವು ಅವು ತ್ವರಿತಗತಿಯಲ್ಲಿ

ಯಾವುದೊ ಗಂಡಾಂತರದಿಂದ ಓಡಿಹೋಗುವ ಹಾಗೆ
ಎದ್ದು ಬಿದ್ದೇಳುತ್ತ ಸಾಗುತಿದ್ದುವು; ಕೆಲವು ಏನೋ ಮರೆತು
ಬಂದಂತೆ ಮರಳುತಿದ್ದುವು ಅಷ್ಟು ದೂರ

ಎಲ! ಎಲ! ಯಾಕಿಷ್ಟು ಆತುರ? ಏನಾಯಿತು?
ಯಾವ ಅಪಾಯ ಬಂತು ಈ ಹೊತ್ತಲ್ಲದ ಹೊತ್ತು
ಎಂದು ತಡೆದು ಕೇಳುವ ಮನಸ್ಸಾಯಿತಾದರೂ

ಅನಿಸಿತು-ಇದು ಇರುವೆಗಳ ಜಗತ್ತು
ಅವು ಹೊತ್ತು ಮುಗ್ಗರಿಸುವ ಮೂಟೆಗಳ ಒಜ್ಜೆ
ನನ್ನ ಕಲ್ಪನೆಗೆ ಕೂಡ ಮೀರಿದ್ದು

ಆದರೂ ಊಹಿಸಬಲ್ಲೆ ನನ್ನ ರಕ್ಕಸ ಹೆಜ್ಜೆ
ಹಠಾತ್ತನೆ ಎರಗುವುದನ್ನು ಈ ಜಗತ್ತಿನ ಮೇಲೆ
ಇಂಥದೇ ಇನ್ನೊಂದು ದಿನ ಇನ್ನೊಂದು ಕಡೆ

ಮನುಷ್ಯ ಕಣ್ಣುಗಳನ್ನು ಮುಸುಕಿದ ವೇಳೆ
ಮನುಷ್ಯ ಜಗತ್ತಿನ ಮಾಯೆ-ಸಕಲರನ್ನೂ
ಕಾಪಾಡಬೇಕು ತೀರ್‍ಥಂಕರನ ದಯೆ
*****

Latest posts by ತಿರುಮಲೇಶ್ ಕೆ ವಿ (see all)