ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು
ಹೇಳುವೆ ನಿಮಗೆ ಕೇಳೋ                        |ಪ|

ನಾಳಿಗಿಂದಿಗೆ ಎನ್ನಲಾಗದು
ಪೇಳುವೆನೀಪರೀ ಶಾಸ್ತ್ರ ಲಕ್ಷಣ
ಜಾಳು ಮಾತುಗಳಲ್ಲೋ ತಮ್ಮಾ
ಕಾಳಿನೊಳು ಬೆಳದಿಂಗಳಂತೆ                     |ಅ.ಪ.|

ನೆಲದೊಳು ಅಗ್ನಿ ಇಕ್ಕಿ ನೋಡಲು ನಿಂತು
ಕರ್ಬಲದ ಹೊಳಿಯು ಉಕ್ಕಿ
ಬಲಿಯನೊಡ್ಡಿದ ಬ್ರಹ್ಮ ತಾಬೂತ
ಕಲಿಯುಗದಿ ಕೌತುಕವಾಯಿತು
ಹಲವು ಮಾತುಗಳ್ಯಾಕೋ ಶರಣರ
ಛಲಕೆ ಒದಗಿತು ಶಾಹಿರತ್ ಕವಿ                  |೧|

ಕಲ್ಲು ನೀರೊಳು ಮುಳುಗಿ ಲಡಾಯದಿ
ಗುಲ್ಲುಮಾಡಿತು ಗಡಿಗಿ
ಹಲ್ಲಿ ಹೋಗಿ ಹಾವ ನುಂಗಿತು
ಸಲ್ಲು-ಸಲ್ಲಿಗೆ ಧೀನ ಎಂಬುತ
ಕಲ್ಲಿ ಹಾಕಿದ ದನಗಳೆಲ್ಲ
ಹುಲ್ಲು ತಿಂದವು ಹೊಟ್ಟೆ ತುಂಬ                   |೨|

ಮುಕ್ಕು ಮುಗಿಯು ಸಡಲಿ ಅಕ್ಕರದಲಿ
ಉಕ್ಕು ನುಂಗಿತು ಕೊಡಲಿ
ತೆಕ್ಕಿ ಉರಿತಾ ಎದ್ದು ವಿಕಾರ್ಮುಖಿ
ನೆಕ್ಕಿ ನೀರವನೆಲ್ಲ ಕುಡಿಯಿತು
ದಿಕ್ಕು ಎಂಟುಗಳೆಲ್ಲ ನುಂಗಿತು
ಮಿಕ್ಕದೊಂದು ಇಲಿಯು ಬಂದು                   |೩|

ಬೆಡಗಿನ ಶಹದತ್ತು ಕವಿತಜಾತ
ಒಡೆದು ಹೇಳಿದರ ಗೊತ್ತು
ಪೊಡವಿಪತಿ ಶಿಶುನಾಳಧೀಶನ
ಅಡಿಗೆ ಮತ್ತೊಮ್ಮೆರಗಿ ಹೇಳೋ
ಬಡನಡುವಿನ ಮುದುಕಿಯೊಬ್ಬಳು
ಸಡಗರದಿ ಆಡಿದಳೋ ಅಲಾವಿ                   |೪|
*****