ನಾಚಿತೋ ಮೋರುಮ ಐಸುರಕಿದು
ನಾಚಿತೋ ಮೋರುಮ || ಪ ||
ಊಚ ಅಲಾವಿಗೆ ಚಾಚಿದ ಬೆಂಕಿಗೆ
ಬೂಚರ ಕೇಚರ ತಾಚಾರ ತಿಳಿಯದೆ || ೧ ||
ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು
ಸುಳ್ಳು ಸವಾಲು ಜವಾಬು ಹೇಳುದ ಕಂಡು || ೨ ||
ಹಾಳು ಮಣ್ಣಿಲೆ ಮುಚ್ಚಿ ದಾಳಿಂಬರ ಗೊನಿ ಚುಚ್ಚಿ
ಬಹಳ ವಿಲಾಸದಿ ಹೇಳುವದನು ಕಂಡು |! ೩ ||
ಕತ್ತಲಶಹಾದತ್ತ ಮಥನದೊಳು ಇಹಳೆಂದು
ಹಿತವರಿಯದೆ ತಾನು ಗತಿಇಲ್ಲದನು ಕಂಡು || ೪ ||
ಚೂರಚಂಗೆದ ಎಡಿ ಸಾರಿ ಓದಕಿಮಾಡಿ
ನೀರಿನ ಬದಿಯಲ್ಲಿ ಮಾರಿ ತಗ್ಗಿಸಿ ನಿಂತು || ೫ ||
ಸಾಲು ತುರುಕರು ಜತ್ತು ಮೇಲೆ ಡೋಲಿಯ ಹೊತ್ತು
ಅಲ್ಬೀದಾ ಹೇಳುವಾಗ ಜೊಲ್ಲ ಬಿತ್ತು ಗಡ್ಡದಮ್ಯಾಲ || ೬ ||
ವಲ್ಲಭ ಶಿಶುನಾಳ ಬಲ್ಲಿದ ಗುರುವಿನ
ಮುಲ್ಲಾ ಓದಕಿಮಾಡಿ ಬೆಲ್ಲ ಹಂಚುದ ಕಂಡು |! ೭ !|
*****