ಹುಡುಗಿ ದಿನಚರಿ ಬರೆಯುತ್ತಾಳೆ.
ಸುಂದರ ಹಗಲುಗಳ ಇಂಚಿಂಚನ್ನೂ
ವರ್ಣರಂಜಿತ ಪುಟಗಳಲ್ಲಿ
ಸೆರೆಹಿಡಿಯುತ್ತಾಳೆ.
ನೂರೆಂಟು ಬಾರಿ ಯೋಚಿಸಿದರೂ
ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು
ಬರೆಯಲಾಗದೆ ಮಿಡುಕುತ್ತಾಳೆ.
ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊಂಡು
ಶಬ್ದಗಳಿಗಾಗಿ ತಡಕಾಡುತ್ತಾಳೆ.
ಒಂದು ದಿನ
ಅಪ್ರಕಟಿತ ಭಾವಗಳಡಿ
ಬೆಂದು ಬೂದಿಯಾಗುತ್ತಾಳೆ.
ದಿನಚರಿಯ ವರ್ಣರಂಜಿತ
ಪುಟಗಳನು ತಿರುವಿಹಾಕಿದವರಿಗೆ
ಪ್ರಶ್ನೆಯಾಗಿ ಕಾಡುತ್ತಾಳೆ.
ಪ್ರಶ್ನೆಯಾಗೇ ಉಳಿಯುತ್ತಾಳೆ!


















