ನಾವೇಕೆ ಹೀಗೆ ಮುಖವಾಡಧಾರಿಗಳು
ಎದುರಿನಲ್ಲಿ ಹೊಗಳಿಕೆ-ಹೊನ್ನಶೂಲದ ತಿಮಿತ
ಹಿಂದೆ-ವ್ಯಂಗ್ಯಕಟಕಿ ಕುಹಕ
ಪವಿತ್ರ ಸ್ನೇಹಕ್ಕೆ ಕೊರತೆಯೇ?
ನಮ್ಮ ನಗುವೇಕೆ ಹೀಗೆ?
ತುಟಿ ತೆರೆದು, ಹಲ್ಲು ತೋರಿಸಿ ವಕ್ರ
ನಗೆ ಬಿರಿದು, ಸ್ನೇಹಸ್ಮಿತವಲ್ಲ ಅದು
ಅಣಕು ನಗುವೇ?
ನಮ್ಮ ಮನಸ್ಸೇಕೆ ಹೀಗೆ?
ಪಾಚಿಗಟ್ಟಿದ ಹೊಲಸು ನೀರಿನ ಹಾಗೆ
ರೊಚ್ಚೆ ತುಂಬಿದ ಕೊಚ್ಚೆಯ ಹಾಗೆ
ದ್ವೇಷದಿಂದ ಮೆರೆಯುತ್ತ
ಪ್ರೀತಿ, ಅಭಿಮಾನ ಕೊಲ್ಲುತ್ತ
ನೆರೆಹೊರೆಗೆ ಸಹಕರಿಸದೆ
ಬದುಕು ಸವೆಸುತ್ತಾ
ಸದ್ಭಾವನೆಯ ಕೊರತೆಯೇ?
ನಾವೇಕೆ ಹೀಗೆ ಪರಿಚತರಾದರೂ
ಪರಸ್ಪರ ಅಪರಿಚಿತರಂತೆ?
ಸಂಬಂಧಗಳನ್ನೇ ಮರೆತವರಂತೆ
ಕಟ್ಟಿಕೊಳ್ಳುತ್ತಿದ್ದೇವೆ ಕೋಟೆ
ಸುತ್ತಲೂ ಜೇಡನಂತೆ
ಸಾಮರಸ್ಯದ ಕೊರತೆಯೇ?
ಆಗಬಾರದೇ ನಾವೆಲ್ಲ
ನಮ್ಮ ಪೂರ್ವಿಕರಂತೆ
ಆದರ್ಶಗಳ ಪಾಲಕರಂತೆ
ಅತಿಥಿಗಳ ಪೂಜಿಸಿ,
ಸ್ನೇಹಿತರ ಆಧರಿಸಿ
ದೀನರಿಗೆ ಬೆಂಬಲಿಸಿ
ಎಲ್ಲರೊಳಗೊಂದಾಗಿ-ಮುಖವಾಡ ಸರಿಸಿ
ನಿಜವಾದ ಮನುಜರಂತೆ
*****


















