ತುಂಬ ತಡವಾಯಿತು ಗೆಳೆಯಾ
ಈ ತನಕ ಇದ್ದೆ ಇನ್ನಿಲ್ಲ.

ಬರುತ್ತೇನೆ ಎಂದು ಹೇಳಿದ್ದೆಯಲ್ಲ?
ಯಾಕೆ ಬರಲಿಲ್ಲ?

ನಾನು ಕಾದಿದ್ದೆ.
ಚುಕ್ಕಿಗಳ ಎಣಿಸುತ್ತ
ಇರುಳುಗಳ ಗುಣಿಸುತ್ತ.
ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ.

ಹೌದು ನಾನು ಕಾದಿದ್ದೆ,
ಹೃದಯ ಬಾವಲಿ ಆಗುವ ತನಕ.
ಮೈ ಇಬ್ಬನಿಯಾಗುವ ತನಕ.
ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ.

ಚಂಡಮಾರುತವಾಯಿತು ನಿಟ್ಟುಸಿರು.
ನಿನ್ನ ಸೆಳೆದು ತರಲಿಲ್ಲ.
ನೀನು ಬರಲಿಲ್ಲ.

ಆದರೆ ಪ್ರೀತಿಯ ಯುದ್ಧದಲ್ಲಿ ಗೆಳೆಯಾ,
ಎಲ್ಲಾ ಕ್ಷಮ್ಯ, ಚುಕ್ಕಿಗಳು ಹೊಳೆಯಲಿ
ನಿನ್ನ ಪಾಲಿಗೆ, ನಗಲಿ ಚಂದಿರ ನಿರಂತರ.
ಈ ರಸ್ತೆಗಳು ಮಾತ್ರ
ತಡೆದು ನಿಲ್ಲಿಸಲಿ ತಿಳಿಸದೆ
ನನ್ನ ಗೋರಿಯ ಹಾದಿಯ.